ಬಳ್ಳಾರಿ: ತಪ್ಪಿತಸ್ಥ ಪಾತಕರಿಗೆ ಅತ್ಯುಗ್ರ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಮನವಿ
ಲೋಕದರ್ಶನ ವರದಿ
ಬಳ್ಳಾರಿ 26: ದೇಶವು ಚುನಾವಣೆಯಲ್ಲಿ ಮುಳುಗಿರುವ ಸಮಯದಲ್ಲಿ ಇತ್ತೀಚೆಗೆ ಅತ್ಯಂತ ಭಯಾನಕವಾಗಿ, ಸಂಶಯಾಸ್ಪದ ರೀತಿಯಲ್ಲಿ ದುರ್ಮರಣಕ್ಕೀಡಾದ ನಗರದ ಓರ್ವ ಇಂಜಿನೀಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ ಅಸಹಜ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಅತ್ಯಂತ ದಾರುಣವಾದ ಪ್ರಕರಣವನ್ನು ಶೀಘ್ರವೇ ಭೇಧಿಸಿ, ದುರ್ಮರಣಕ್ಕೆ ಕಾರಣರಾದ ಅಪರಾಧಿಗಳಿಗೆ ಅತ್ಯಂತ ಉಗ್ರವಾದ ಹಾಗೂ ನಿದರ್ಶನೀಯವಾದ ಕಠಿಣ ಶಿಕ್ಷಯನ್ನು ವಿಧಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಐಎಂಎಸ್ಎಸ್, ಎಐಡಿಎಸ್ಓ, ಎಐಡಿವೈಓ ಸಂಘಟನೆಗಳು ಆಗ್ರಹಿಸುತ್ತವೆ.
ಅತ್ಯಂತ ಕ್ರೂರವಾಗಿ ಹತ್ಯೆಗೀಡಾಗಿರುವಳೆಂದೇ ಜನಜನಿತವಾಗಿರುವ ದಟ್ಟ ಅಭಿಪ್ರಾಯಕ್ಕೆ ಪೂರಕವಾಗಿ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿ ಜಿಲ್ಲೆಯಾದ್ಯಂತ, ಅಷ್ಟೇ ಅಲ್ಲ ರಾಜ್ಯದ ಮೂಲೆಮೂಲೆಗಳಲ್ಲಿ, ದೇಶದ ವಿವಿಧ ಭಾಗಗಳಲ್ಲಿ ಬೇರೆಬೇರೆ ರೀತಿಯಲ್ಲಿ ಹೋರಾಟಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈ ಚಳುವಳಿಯಲ್ಲಿ ಮಹಿಳೆಯರು ಸೇರಿದಂತೆ ಸಾವಿರಾರುವಿದ್ಯಾರ್ಥಿ,ಯುವಜನರು ಭಾಗವಹಿಸಿದ್ದರು. ಇದೀಗ ಶೀಘ್ರ ತನಿಖೆಯಾಗಿ ಮಧುವಿಗೆ ನ್ಯಾಯ ಸಿಗುವುದು ವಿಳಂಬವಾಗಬಾರದೆಂದು ವಿದ್ಯಾರ್ಥಿ, ಯುವಜನರು ಹಾಗೂ ಮಹಿಳೆಯರು ತಮ್ಮ ಹೋರಾಟವನ್ನು ಮುಂದುವರೆಸಿದ್ದಾರೆ.
ಈ ಘಟನೆಯಲ್ಲಿೆ ಮೇಲ್ನೋಟಕ್ಕೆ ಸಾಮಾನ್ಯ ಜನರೂ ಸಹ ಆತ್ಮಹತ್ಯೆಯಲ್ಲ, ಕೊಲೆ ಮಾಡಿರಬಹುದೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದನ್ನು ಆರಂಭದಲ್ಲಿ ಒಂದು ಆತ್ಮಹತ್ಯೆ ಎಂಬಂತೆ ಬಿಂಬಿಸಲಾಯಿತು. ರಾಯಚೂರಿನ ಜನಗಳ ಅದರಲ್ಲೂ ಮುಖ್ಯವಾಗಿವಿದ್ಯಾರ್ಥಿಗಳ ಹೋರಾಟದ ಫಲವಾಗಿ ಅತ್ಯಾಚಾರ ಮತ್ತು ಕೊಲೆ ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಕೊಲೆ ಪ್ರಕರಣವನ್ನು ಖಂಡಿಸಿ ಎಐಎಂಎಸ್ಎಸ್, ಎಐಡಿಎಸ್ಓ ಹಾಗೂ ಎಐಡಿವೈಓ ಸಂಘಟನೆಗಳಿಂದ ಪ್ರತಿಭಟನಾ ಮೆರವಣಿಗೆಯನ್ನು ಸಂಘಟಿಸಲಾಗಿತ್ತು. ಗಾಂಧಿ ಭವನದಿಂದ ಜಿಲ್ಲಾಧಿಕಾರಿಗಳ ಕಛೇರಿಯ ವರೆಗೆ ಬೃಹತ್ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಎಐಡಿಎಸ್ಓ ರಾಜ್ಯ ಅಧ್ಯಕ್ಷರಾದ ಡಾ.ಪ್ರಮೋದ್, ಎಐಎಂಎಸ್ಎಸ್ನ ಜಿಲ್ಲಾಧ್ಯಕ್ಷರಾದ ಶಾಂತಾ.ಎ, ಎಐಡಿಎಸ್ಓ ಜಿಲ್ಲಾಧ್ಯಕ್ಷರಾದ ಗೋವಿಂದ್, ಎಐಡಿವೈಓ ಜಿಲ್ಲಾ ಕಾರ್ಯದರ್ಶಿ ಯರ್ರಿಸ್ವಾಮಿ. ಮುಖಂಡರಾದ ಸುರೇಶ್, ಈಶ್ವರಿ, ಜಗದೀಶ್, ರವಿಕಿರಣ್, ರಾಜಾ, ರಂಗಸ್ವಾಮಿ ಮುಂತಾದವರು ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮನವಿ ಪತ್ರವನ್ನು ತಹಸಿಲ್ದಾರ್ ಮೆಹತಾ ಸ್ವೀಕರಿಸಿದರು.