ಬಳ್ಳಾರಿ: ಶಾಸಕ ಆನಂದ್ ಸಿಂಗ್ ಮತ್ತು ನಾನು ಅಣ್ಣ ತಮ್ಮಂದಿರಿದ್ದಂತೆ ಎಂದ ಕಂಪ್ಲಿ ಶಾಸಕ ಗಣೇಶ್
ಲೋಕದರ್ಶನ ವರದಿ
ಬಳ್ಳಾರಿ 27: ಹೊಸಕೋಟೆ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಸೇರಿ ಇದೀಗ ಜಾಮೀನಿನ ಮೇಲೆ ಹೊರಬಂದಿರುವ ಕಂಪ್ಲಿ ಶಾಸಕ ಗಣೇಶ್, ನಾನು, ಶಾಸಕ ಆನಂದ್ ಸಿಂಗ್ ಅಣ್ಣ-ತಮ್ಮರಿದ್ದಂತೆ. ಈಗಲ್ಟನ್ ರೆಸಾಟ್ರ್ನಲ್ಲಿ ನಡೆದ ಗಲಾಟೆ ಆಕಸ್ಮಿಕ ಎಂದಿದ್ದಾರೆ.
ಜಾಮೀನು ದೊರೆತ ನಂತರ ಬಳ್ಳಾರಿಯ ಹೊಸಪೇಟೆಯ ತಮ್ಮ ನಿವಾಸಕ್ಕೆ ಆಗಮಿಸಿದ ವೇಳೆ ಮಾತನಾಡಿ, ಆನಂದ್ ಸಿಂಗ್ ಮೇಲೆ ಈಗಲೂ ಅಭಿಮಾನವಿದೆ. ನನ್ನ ಅಮಾನತು ವಾಪಸ್ ಪಡೆಯುವ ವಿಶ್ವಾಸವಿದೆ. ಗಲಾಟೆ ಕುರಿತು ಏನೂ ಹೇಳುವುದಿಲ್ಲ ಎಂದಿದ್ದಾರೆ.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಮ್ಮ ಸಮುದಾಯದ ಹಿರಿಯರು ಹಾಗಾಗಿ ನಮ್ಮ ಮನೆಗೆ ಭೇಟಿ ನೀಡಿದ್ದರು. ರಮೇಶ್ ಜಾರಕಿಹೊಳಿಯವರು ಬಿಜೆಪಿಗೆ ಹೋಗುವುದಿಲ್ಲ. ಅವರ ಬಳಿ ಚರ್ಚಿಸಿ ಮನವೊಲಿಸುತ್ತೇನೆ. ನಾನು ಯಾವಾಗಲೂ ಕಾಂಗ್ರೆಸ್ನಲ್ಲಿರುತ್ತೇನೆ. ಸಮ್ಮಿಶ್ರ ಸರ್ಕಾರ ಸುಭದ್ರವಾಗಿರಲಿ. ನಾನು ಸೇರಿ ಯಾರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಹೇಳಿದರು.
ಎರಡು ತಿಂಗಳಿಂದ ಕ್ಷೇತ್ರದಲ್ಲಿ ಇಲ್ಲದ ನೋವು ಕಾಡುತ್ತಿದೆ. ಇನ್ಮುಂದೆ ಕಂಪ್ಲಿ, ಕುರುಗೋಡಿನಲ್ಲಿ ಇರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಗಲಾಟೆಯಲ್ಲಿ ಅವಳು ಎನ್ನುವ ವಿಡಿಯೋ ವೈರಲ್ ಆಗಿದ್ದು, ಯಾರವರು ಎನ್ನುವ ಸುದ್ದಿಗಾರರ ಪ್ರಶ್ನೆಗೆ ಈಗೇನು ಆ ಬಗ್ಗೆ ಹೇಳುವುದಿಲ್ಲ ಎಂದು ಹೇಳಿದರು.
ಜನವರಿ 20ರಂದು ತಡರಾತ್ರಿ ಕುಡಿದ ಮತ್ತಿನಲ್ಲಿ ಗಣೇಶ್ ಅವರು ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆನಂದ್ ಸಿಂಗ್ ಆಸ್ಪತ್ರೆ ಸೇರಿದ್ದರು. ಬಳಿಕ ಜ. 21ರಂದು ಗಣೇಶ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್ಐಆರ್ ದಾಖಲಾದ ದಿನದಿಂದಲೇ ತಲೆಮರೆಸಿಕೊಂಡಿದ್ದ ಗಣೇಶ್ರನ್ನು ಗುಜರಾತ್ನ ಅಹಮದಾಬಾದ್ನಲ್ಲಿ ಫೆ. 20ರಂದು ಪೋಲೀಸರು ಬಂಧಿಸಿದ್ದರು. ಬಳಿಕ ಏ. 24ರಂದು ಷರತ್ತು ಬದ್ಧ ಜಾಮೀನು ಮಂಜೂರಾಗಿತ್ತು