ಹೊಸಪೇಟೆ

ಬೆಳಗಾವಿ- ಮಂತ್ರಾಲಯ ವಿಶೇಷ ರೈಲು ಅಕ್ಟೋಬರ್ 16 ರಿಂದ ಪುನರಾರಂಭ

ಬೆಳಗಾವಿ- ಮಂತ್ರಾಲಯ ವಿಶೇಷ ರೈಲು ಅಕ್ಟೋಬರ್ 16 ರಿಂದ ಪುನರಾರಂಭ

ಹೊಸಪೇಟೆ 13: ಕಳೆದ ಆರು ತಿಂಗಳಿಂದ ಸಂಚಾರರದ್ದಾಗಿದ್ದ ಬೆಳಗಾವಿ-ಹೊಸಪೇಟೆ-ಮಂತ್ರಾಲಯ -ಹೈದ್ರಬಾದ್‌-ಮಣುಗೂರು ವಿಶೇಷ ರೈಲು ಅಕ್ಟೋಬರ್ 16 ರಿಂದ ಪುನರಾರಂಭವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಿಸಿದೆ. ಅದರಂತೆ ಈ ರೈಲು ಸಂಖ್ಯೆ 07335 ವಾರದಲ್ಲಿ ನಾಲ್ಕುದಿನ ಭಾನುವಾರ, ಮಂಗಳವಾರ, ಬುಧವಾರ ಹಾಗೂ ಶನಿವಾರ ಬೆಳಗಾವಿಯಿಂದ ಮಧ್ಯಾಹ್ನ 12:40ಕ್ಕೆ ನಿರ್ಗಮಿಸಿ ಖಾನಾಪುರ, ಲೋಂಡಾ, ಹುಬ್ಬಳ್ಳಿಗೆ ಮಧ್ಯಾಹ್ನ 3:20ಕ್ಕೆ ತಲುಪಿ ಗದಗ, ಕೊಪ್ಪಳ, ಮಾರ್ಗವಾಗಿ ಹೊಸಪೇಟೆಗೆ ಸಂಜೆ:6:00ಗಂಟೆಗೆ ಆಗಮಿಸುವುದು. ನಂತರ ತೋರಣಗಲ್ಲು, ಬಳ್ಳಾರಿ, ಗುಂತಕಲ್, ಆದೋನಿ, ಮಂತ್ರಾಲಯಕ್ಕೆ ರಾತ್ರಿ 11:00 ಗಂಟೆಗೆ ತಲುಪಿ ರಾಯಚೂರು, ಯಾದಗಿರಿ, ವಿಕಾರಾಬಾದ್ ಮಾರ್ಗವಾಗಿ ಮರುದಿನ ಬೆಳಿಗ್ಗೆ 5:30ಕ್ಕೆ ಸಿಕಂದರಾಬಾದ್ ತಲುಪಲಿದೆ, ಅಲ್ಲಿಂದ ನಿರ್ಗಮಿಸಿ ವಾರಂಗಲ್, ಭದ್ರಾಚಲಂ, ಮಣಗೂರಿಗೆ ಮಧ್ಯಾಹ್ನ 12:50ಕ್ಕೆ ತಲುಪುವುದು.  

ಅದೇ ರೀತಿ ಹಿಂತಿರುಗುವ ಮಾರ್ಗದಲ್ಲಿ ಮಣಗೂರು-ಬೆಳಗಾವಿ ಗಾಡಿ ಸಂಖ್ಯೆ 07336 ವಾರದಲ್ಲಿ ನಾಲ್ಕು ದಿನ ಸೋಮವಾರ ಬುಧವಾರ, ಗುರುವಾರ, ಭಾನುವಾರ, ಮಣಗೂರುನಿಂದ ಮಧ್ಯಾಹ್ನ 3:50ಕ್ಕೆ ನಿರ್ಗಮಿಸಿ ಸಿಕಂದ್ರಬಾದ್ ರಾತ್ರಿ 10:10ಕ್ಕೆ ಹೊರಟು ಮಂತ್ರಾಲಯಕ್ಕೆ ಬೆಳಿಗ್ಗೆ4:00ಗಂಟೆ ತಲುಪಿ ನಂತರ ಹೊಸಪೇಟೆಗೆ ಬೆಳಿಗ್ಗೆ 9:20 ತಲುಪುವುದು ಹುಬ್ಬಳ್ಳಿಯನ್ನು ಮಧ್ಯಾಹ್ನ 12:20ಕ್ಕೆ ತಲುಪಿ ಬೆಳಗಾವಿಗೆ ಸಂಜೆ 4:00 ಗಂಟೆಗೆ ತಲುಪಲಿದೆ.  

ಈ ರೈಲು ಪುನರಾರಂಭದಿಂದ ಉತ್ತರ-ಕರ್ನಾಟಕ ಹಾಗೂ ಬಳ್ಳಾರಿ, ವಿಜಯನಗರ ಜಿಲ್ಲೆಗಳಿಂದ ಪ್ರಸಿದ್ಧ ಯಾತ್ರಾ ಸ್ಥಳ ಮಂತ್ರಾಲಯಕ್ಕೆ ನೇರ ಸಂಪರ್ಕ ಉಂಟಾಗಿ ಭಕ್ತಾದಿಗಳಿಗೆ ಅನುಕೂಲವಾಗುತ್ತದೆ. ಅದೇ ರೀತಿ ತೆಲಂಗಾಣದ ಭದ್ರಾಚಲಂ ಪ್ರಸಿದ್ಧಪುಣ್ಯ ಕ್ಷೇತ್ರವಾಗಿದ್ದು ರಾಮ-ಲಕ್ಷ್ಮಣರು ಸೀತಾನ್ವೇಷಣೆ ಮಾರ್ಗದಲ್ಲಿ ಲಂಕೆಗೆ ತೆರಳುವ ಮಾರ್ಗದಲ್ಲಿ ಗೋದಾವರಿನದಿ ತೀರದಲ್ಲಿರುವ ಭದ್ರಾಚಲಂನಲ್ಲಿ ತಂಗಿದ್ದರು ಎಂಬ ನಂಬಿಕೆ ಇದ್ದು, ಅಲ್ಲಿ ಪ್ರಾಚೀನವಾದ ಭವ್ಯ ರಾಮಮಂದಿರವಿದೆ.  

ರೈಲು ಪುನರಾರಂಭಕ್ಕೆ ಹಲವು ಬಾರಿ ವಿಜಯನಗರ ರೈಲ್ವೆ ಕ್ರಿಯಾ ಸಮಿತಿಯ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿತ್ತು ವಿಶೇಷವಾಗಿ ಈ ರೈಲು ಆರಂಭಕ್ಕೆ ಕಾರಣೀಭೂತರಾದ ಕೇಂದ್ರ ಸಚಿವ ಪ್ರಹ್ಲಾದಜೋಷಿ, ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ.ಸೋಮಣ್ಣ ಮತ್ತು ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಬಾಬುಲಾಲ್ ಜೈನ್ ಅವರಿಗೆ ಸಮಿತಿಯ ಅಭಿನಂದನೆ ಸಲ್ಲಿಸುತ್ತದೆ. 


ಸುದ್ದಿ ಓದಿ