31ರಂದು ಬೆಳಗಾವಿ ವಿಭಾಗ ಮಟ್ಟದ ಬಹಿರಂಗ ಮಹಾಸಭೆ
ಬೈಲಹೊಂಗಲ 20: ಕೇಂದ್ರ,ರಾಜ್ಯ ಸರಕಾರಗಳು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ರೈತ ವಿರೋಧಿ ನೀತಿಯ ಕರಾಳ ಕಾನೂನುಗಳನ್ನು ವಿರೋಧಿಸಿ ಬೃಹತ್ ಬಹಿರಂಗ ಮಹಾಪಂಚಾಯತ ಮುಖಾಂತರ ರೈತರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ, ಹಸಿರುಸೇನೆ ಆಶ್ರಯದಲ್ಲಿ ಬೆಳಗಾವಿ ಸಿಪಿಇಡಿ ಮೈದಾನದಲ್ಲಿ ದಿ.31 ರಂದು 11 ಕ್ಕೆ ಬೆಳಗಾವಿ ವಿಭಾಗ ಮಟ್ಟದ ಬಹಿರಂಗ ಮಹಾಸಭಾ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ, ಮುಖಂಡ ಶಿವರಾಯಪ್ಪ ಜೋಗಿನ ತಿಳಿಸಿದರು.
ಈ ಕುರಿತು ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೇಂದ್ರ ಸರಕಾರವು ಜಾರಿಗೆ ತಂದಿರುವ ಭೂಸುಧಾರಣೆ ಕಾಯ್ದೆ, ಅಗತ್ಯ ವಸ್ತುಗಳ ಕಾಯ್ದೆ, ಎಪಿಎಂಸಿ ಕಾಯ್ದೆ , ವಿದ್ಯುತ್ ಕಾಯ್ದೆ, ಕೃûಷಿ ಗುತ್ತಿಗೆ ಕಾಯ್ದೆ ಮುಂತಾದ ಕರಾಳ ಕಾಯ್ದೆಗಳು ರೈತರಿಗೆ ಮಾರಕವಾಗಿ ಪರಿಣಮಿಸಿವೆ. ಇವೆಲ್ಲವುಗಳನ್ನು ಕೆಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು. ದೆಹಲಿಯಲ್ಲಿ ಹಗಲಿರುಳೆನ್ನದೆ ಧÀರಣಿ ನಡೆಸುತ್ತಿರುವ ರೈತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಬೆಳಗಾವಿ ವಿಭಾಗ ಮಟ್ಟದ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರು ಕಬ್ಬಿನ ದರ ಹೆಚ್ಚಿಸದೆ, ಬಾಕಿ ಬಿಲ್ಲು ಪಾವತಿಸದಿರುವದರಿಂದ ತೀವ್ರ ತೊಂದರೆಯಲ್ಲಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 2018 ರಿಂದ ಅತಿವೃಷ್ಠಿ, ಅನಾವೃಷ್ಠಿ,ಪ್ರವಾಹಗಳಿಂದ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಕನಿಷ್ಠ ಮಾನವೀಯತೆ ಇಲ್ಲದ ಬ್ಯಾಂಕು, ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ತುಂಬದ ರೈತರನ್ನು ಸಾಲ ತುಂಬುವಂತೆ ಒತ್ತಾಯಿಸುತ್ತಿರುವದು ಸರಿಯಲ್ಲ. ಇಂಥವರ ಮೇಲೆ ಸರಕಾರ ಕ್ರಮ ಕೈಗೊಳ್ಳಬೇಕು. ಕೃಷಿ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಿ ರೈತರ, ಗ್ರಾಹಕರ ಹಿತ ಕಾಪಾಡಬೇಕು. ರೈತರು ಗೌರವಯುತ ಬದುಕು ಸಾಗಿಸಲು ಸರಕಾರ ಉತ್ತಮ ಕಾನೂನು ರೂಪಿಸಬೇಕೆಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ ,ಜಿಲ್ಲಾ ಕಾರ್ಯಾಧ್ಯಕ್ಷ ರವಿ ಸಿದ್ದನ್ನವರ, ತಾಲೂಕ ಅಧ್ಯಕ್ಷ ಮಹಾಂತೇಶ ಹಿರೇಮಠ, ಈಶ್ವರ ಶಿಲ್ಲೇದಾರ, ಬಸವರಾಜ ಕಾನಗೌಡ, ಅರ್ಜುನ ರಾಯಬಾಗ,ಮಡಿವಾಳಪ್ಪ ಹಿರೆಹೋಳಿ, ಸುರೇಖಾ ಕಾಬೋಜಿ, ರಾಯಪ್ಪ ಪೂಜೇರಿ, ಆನಂದ ಹೂಲಿ,ಗುರು ಸೋಮನ್ನವರ ಇದ್ದರು.