ಬೈಲಹೊಂಗಲ

28ರಂದು ಬೆಳವಡಿ ಮಲ್ಲಮ್ಮನ ಉತ್ಸವ ಸರಳವಾಗಿ ಆಚರಣೆ: ಹಿರೇಮಠ

28ರಂದು ಬೆಳವಡಿ ಮಲ್ಲಮ್ಮನ ಉತ್ಸವ ಸರಳವಾಗಿ ಆಚರಣೆ: ಹಿರೇಮಠ
ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ 2021 ರ ಆಚರಣೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲ

ಬೈಲಹೊಂಗಲ 22: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದ ವೀರವನಿತೆ ಬೆಳವಡಿ ಮಲ್ಲಮ್ಮನ ಉತ್ಸವವನ್ನು ಫೆ.28ರಂದು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿದರು.

ತಾಲೂಕಿನ ಬೆಳವಡಿ ಗ್ರಾಮದ ರಾಣಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಬೆಳವಡಿ ಮಲ್ಲಮ್ಮ ಉತ್ಸವ 2021 ರ ಆಚರಣೆ ಕುರಿತು ನಡೆದ  ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋವಿಡ್ ನಿಯಂತ್ರಣ ಮಾರ್ಗಸೂಚಿಯಂತೆ ಜನರ ಆರೋಗ್ಯದ ಹಿತದೃಷ್ಟಿಯಿಂದ ರಾಣಿ ಮಲ್ಲಮ್ಮಳ ಉತ್ಸವವನ್ನು ಫೆ.28 ರಂದು ಬೆಳಗ್ಗೆ 10 ಕ್ಕೆ ರಾಣಿ ಮಲ್ಲಮ್ಮಳ ವೀರ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಅತ್ಯಂತ ಸರಳವಾಗಿ ಆಚರಿಸಲಾಗುವುದು. ರಾಣಿ ಮಲ್ಲಮ್ಮಳ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲಾಗುತ್ತಿದ್ದರೂ ಮಲ್ಲಮ್ಮಳ ವೀರ ಜ್ಯೋತಿಯಾತ್ರೆ ಮಾತ್ರ ಅವಳ ತವರೂರಾದ ಉತ್ತರ ಕನ್ನಡ ಜಿಲ್ಲೆಯ ಸೋಂದಾದಿಂದ ಹೊರಟು ಚನ್ನಮ್ಮನ ಕಿತ್ತೂರು, ಕಾಕತಿ, ಬೈಲಹೊಂಗಲದಲ್ಲಿ ಸ್ವಾಗತಿಸಿಗೊಂಡು ಬೆಳವಡಿ ಗ್ರಾಮ ತಲುಪಲಿದೆ ಎಂದರು. 

ರಾಣಿ ಮಲ್ಲಮ್ಮ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಆರ್.ಬಿ.ಪಾಟೀಲ, ಪ್ರಕಾಶ ಹುಂಬಿ ಮಾತನಾಡಿ, ಸರ್ಕಾರದ ಎಲ್ಲ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ಮಲ್ಲಮ್ಮ ರಾಣಿಯ ಭಾವಚಿತ್ರ ಹಾಕುವಂತೆ ಆದೇಶಿಸಬೇಕು. ರಾಣಿ ಮಲ್ಲಮ್ಮಳ ಶೌರ್ಯ ಪರಾಕ್ರಮದ ಇತಿಹಾಸವನ್ನು ಶಾಲಾ ಪಠ್ಯದಲ್ಲಿ ಅಳವಡಿಸಬೇಕೆಂದರು.

ಮಲ್ಲಮ್ಮಳ ಉತ್ಸವ ಆಚರಣೆಗೆ ಶಾಶ್ವತ ಜಾಗ ಒದಗಿಸಿ ಕೊಡುವ ಬಗ್ಗೆ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಗ್ರಾಮಸ್ಥರಾದ ಎಮ್.ವಿ.ನೆಲ್ಲಿಗಣಿ, ಶಂಕರ ಕರೀಕಟ್ಟಿ, ಬಾಬು ಖಂಡೋಜಿ, ವಿಶ್ವನಾಥ್ ಪೂಜೇರ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಬೆಳವಡಿ ಬಸ್ ನಿಲ್ದಾಣದ ಸಮೀಪದಲ್ಲೇ ಯಾರಾದರೊಬ್ಬರು ಜಾಗ ನೀಡಲು ಮುಂದಾದರೆ ಸರ್ಕಾರದ ವತಿಯಿಂದ ಅದನ್ನು ಖರೀದಿಸಿ ಉತ್ಸವ ಆಚರಣೆಗೆ ಶಾಶ್ವತ ಸ್ಥಳಾವಕಾಶ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. 

ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕೋವಿಡ್ ಕಾರಣದಿಂದ ರಾಣಿ ಮಲ್ಲಮ್ಮಳ ಉತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ. ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ರಾಣಿಯ ಇತಿಹಾಸವನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ ಎಂದರು. ಜಿ.ಪಂ.ಸದಸ್ಯ ಈರಣ್ಣ ಕರೀಕಟ್ಟಿ ಮಾತನಾಡಿದರು. 

ಇದೇ ವೇಳೆ ಬೆಳವಡಿ ಗ್ರಾ.ಪಂ.ನೂತನ ಸದಸ್ಯರು ಜಿಲ್ಲಾಧಿಕಾರಿಗಳನ್ನು ಸತ್ಕರಿಸಿದರು. ಗ್ರಾಪಂ ಅಧ್ಯಕ್ಷೆ ಮಂಜುಳಾ ಕುರಿ ನೇತೃತ್ವ ವಹಿಸಿದ್ದರು. ಉಪವಿಭಾಗಾಧಿಕಾರಿ ಶಶಿಧರ ಬಗಲಿ ಸ್ವಾಗತಿಸಿದರು. ಉಪನ್ಯಾಸಕ ಮಹಾಂತೇಶ ಉಪ್ಪಿನ ನಿರೂಪಿಸಿದರು. ತಹಶೀಲ್ದಾರ್ ಬಸವರಾಜ ನಾಗರಾಳ ವಂದಿಸಿದರು.   

ಸುದ್ದಿ ಓದಿ