ಅಥಣಿ

ಬಸವೇಶ್ವರ ಏತ ನೀರಾವರಿ ಯೋಜನೆ ಡಿಸೆಂಬರ ಅಂತ್ಯದೊಳಗೆ ಪೂರ್ಣ

ಬಸವೇಶ್ವರ ಏತ ನೀರಾವರಿ ಯೋಜನೆ ಡಿಸೆಂಬರ ಅಂತ್ಯದೊಳಗೆ ಪೂರ್ಣ

ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ: ಯೋಜನೆ ಪ್ರಗತಿ ಕುರಿತು ಅಧಿಕಾರಿ, ಗುತ್ತಿಗೆದಾರರೊಂದಿಗೆ ಸಭೆ 

ಅಥಣಿ 27: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಇದೇ ವರ್ಷದ ಡಿಸೆಂಬರ ಅಂತ್ಯದೊಳಗಾಗಿ ಪೂರ್ಣಗೊಳ್ಳುತ್ತದೆ ಇದರಲ್ಲಿ ಯಾವುದೇ ಸಂಶಯ ಬೇಡ. ಈ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ನನಗೆ ಭರವಸೆ ನೀಡಿದ್ದು, ಮುಖ್ಯಮಂತ್ರಿಗಳ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ ಎಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.  

ಅವರು ಅಥಣಿಯ ನೀರಾವರಿ ಇಲಾಖೆಯಲ್ಲಿ ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪ್ರಗತಿ ಕುರಿತು ಅಧಿಕಾರಿ ಹಾಗೂ ಗುತ್ತಿಗೆದಾರರೊಂದಿಗೆ ಸಭೆ ನಡೆಸಿ ಮಾತನಾಡುತ್ತಿದ್ದರು.  

ಕರೋನಾ ಸಂದರ್ಭದ ಎರಡು ವರ್ಷದಲ್ಲಿ ಈ ಯೋಜನೆಗೆ ಹಣ ಬಿಡುಗಡೆ ವಿಳಂಬವಾಯಿತು ಹೀಗಾಗಿ ಈ ಯೋಜನೆಗೆ ಸ್ವಲ್ಪ ಹಿನ್ನಡೆಯಾಗಿದೆ. ಆದರೆ ಇತ್ತೀಚಿಗೆ ಈ ಯೋಜನೆ ಸಂಬಂಧ ಅನೇಕ ಬಾರಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರನ್ನು ಭೇಟಿ ಮಾಡಿ ಯೋಜನೆ ವಿಳಂಬ ಕುರಿತು ಚರ್ಚಿಸಿದ ಪರಿಣಾಮ ಬೊಮ್ಮಾಯಿ ಈ ಯೋಜನೆಯ ಪೂರ್ಣಗೊಳ್ಳಲು ಬೇಕಾದ ಅನುದಾನ ಬಿಡುಗಡೆಗೊಳಿಸಲು ಒಪ್ಪಿಗೆ ಸೂಚಿಸಿದ್ದಲ್ಲದೆ ಯೋಜನೆಯ ಪ್ರಗತಿಯ ಕುರಿತು ಆಗಾಗ ಮಾಹಿತಿ ಕೂಡ ನೀಡಬೇಕು ಎಂದು ನನಗೆ ಸೂಚಿಸಿದ್ದಾರೆ. ಈ ಯೋಜನೆ ಡಿಸೆಂಬರ ಅಂತ್ಯದೊಳಗಾಗಿ ಪೂರ್ಣಗೊಳ್ಳುತ್ತದೆ ಇದರಲ್ಲಿ ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿದ ಅವರು ಈ ಯೋಜನೆ ಪೂರ್ಣಗೊಳ್ಳುವಿಕೆಯಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕೂಡ ಶ್ರಮಿಸುತ್ತಿದ್ದಾರೆ ಎಂದರು.  

ಸಭೆಯಲ್ಲಿ ನೀರಾವರಿ ಇಲಾಖೆಯ ಅಧಿಕ್ಷಕ ಅಭಿಯಂತರ ಬಿ.ಆರ್‌.ರಾಠೋಡ್, ಅಧಿಕಾರಿಗಳಾದ ಎಸ್‌.ಜಿ.ಶ್ರೀನಾಥ, ಕೆ.ರವಿ, ಪ್ರವೀಣ ಹುಣಶಿಕಟ್ಟಿ, ಪ್ರಶಾಂತ ಪೊದ್ದಾರ, ಶಿರೂರ ಗ್ರಾಮ ಪಂಚಾಯತ ಅಧ್ಯಕ್ಷ ಬಾಳು ಹಜಾರೆ, ಖಿಳೇಗಾಂವ ಗ್ರಾಮ ಪಂಚಾಯತ ಅಧ್ಯಕ್ಷ ರವಿ ನಾಗೋಳ, ಮಾಜಿ. ಈ.ಪಂ ಸದಸ್ಯ ದಾದಾ ಶಿಂಧೆ, ಗುಂಡೇವಾಡಿಯ ಶಿವಾನಂದ ಗೊಲಭಾವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ