ಬಸವಜ್ಯೋತಿ ರೈತ ಉತ್ಪಾದಕರ ಸೊಸಾಯಿಟಿ ಶೀಘ್ರ ಆರಂಭ
ಯಕ್ಸಂಬಾದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಘೋಷಣೆ
ಚಿಕ್ಕೋಡಿ 06: ಯಕ್ಸಂಬಾ ಪಟ್ಟಣದಲ್ಲಿ ಬಸವಜ್ಯೋತಿ ರೈತ ಉತ್ಪಾದಕರ ಸೊಸಾಯಿಟಿ ಶೀಘ್ರವಾಗಿ ಆರಂಭಿಸಲಾಗುತ್ತದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಶನಿವಾರ ಯಕ್ಸಂಬಾ ಪಟ್ಟಣದ ಸಂಸದ ಅಣ್ಣಾಸಾಹೇಬ ಜೊಲ್ಲೆ ನಿವಾಸದಲ್ಲಿ ಬಸವಜ್ಯೋತಿ ರೈತ ಉತ್ಪಾದಕರ ಸೊಸಾಯಿಟಿ ನಿರ್ದೇಶಕರ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಭಾರತದಲ್ಲಿ 10 ಸಾವಿರ ರೈತ ಉತ್ಪಾದಕರ ಸಂಘ ಸ್ಥಾಪನೆ ಮಾಡಲು ಗುರಿಹೊಂದಿದ್ದು, ಆ ನಿಟ್ಟಿನಲ್ಲಿ ಯಕ್ಸಂಬಾ ಪಟ್ಟಣದಲ್ಲಿ 1 ಸೊಸಾಯಿಟಿ ತೆರೆಯಲು ನಿರ್ಣಯಿಸಿದ್ದೇವೆ ಎಂದರು.
ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ ನವದೆಹಲಿ ಇದರ ಸಹಯೋಗದಿಂದ ಸ್ಥಾಪಿಸುತ್ತಿದ್ದೇವೆ.ಮುಖ್ಯ ಪ್ರವರ್ತಕರಾಗಿ ಬಸವಪ್ರಸಾದ ಜೊಲ್ಲೆ ನೇಮಿಸಲಾಗಿದೆ. ಈ ಸಂಘವು ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ತಾಂತ್ರಿಕ ಸಹಯೋಗದೊಂದಿಗೆ ಸ್ಥಾಪಿಸುತ್ತಿದ್ದೇವೆ.ಸಹಕಾರ ಇಲಾಖೆಯಿಂದ ಶೇರ ಹಣ ಸಂಗ್ರಹಣೆಗೆ ಅನುಮತಿ ನೀಡಿರುತ್ತಾರೆ. ಶೇರ ಹಣ 1125/- ರೂ ಸಂಗ್ರಹಿಸಲು ತೀರ್ಮಾನಿಸಿ ಶೇರು ಬಿಡುಗಡೆಗೊಳಸಲಾಗಿದೆ. ಇಚ್ಛೆಯುಳ್ಳವರು ಸಂಘದ ಕಚೇರಿಯಲ್ಲಿ ಹಾಗೂ ಆಹಾರ ನಿರ್ದೇಶಕರಲ್ಲಿ ಹಾಗೂ ರೈತ ಉತ್ಪಾದಕರ ಸಂಘದ ನಿರ್ದೇಶಕರಲ್ಲಿ ಮತ್ತು ಬೀರೇಶ್ವರ ಕೋ ಆಪ್ ಕ್ರೆಡಿಟ್ ಸೊಸಾಯಿಟಿಯಲ್ಲಿ ಶೇರನ್ನು ತೆಗೆದುಕೊಳ್ಳಬಹುದು ಎಂದರು.
ಯಕ್ಸಂಬಾ, ಯಾದನವಾಡಿ, ಕಲ್ಲೋಳ, ನನದಿ, ನಣದಿವಾಡಿ, ನಾಗರಳ ಹಿರೇಕುಡಿ, ಉಳ್ಳಾಗಡ್ಡಿವಾಡಿ ವ್ಯಾಪ್ತಿಗೆ ಒಳಗೊಂಡಿದೆ. ಈ ಸೊಸಾಯಿಟಿ ಉದ್ದೇಶಗಳು ರೈತರ ಉತ್ಪಾದನೆ ಹೆಚ್ಚಿಸುವದರೊಂದಿಗೆ ಖರ್ಚು ಕಡಿಮೆ ಮಾಡುವುದು, ರೈತರ ಉತ್ಪನ್ನಗಳನ್ನು ಸಂಸ್ಕರಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುವುದು. ರೈತರು ಸಂಘಟಿತವಾಗಿ ತಮ್ಮ ಉತ್ಪನ್ನಕ್ಕೆ ಹೆಚ್ಚು ಬೆಲೆ ಬರುವಂತೆ ಪ್ರೇರಿಪಿಸುವುದಾಗಿದೆ ಎಂದರು.
ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಕಲ್ಲಪ್ಪ ಜಾಧವ, ಬೀರೇಶ್ವರ ಸಂಸ್ಥೆಯ ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ವಿಜ್ಞಾನಿಗಳು, ಸಸ್ಯ ಸಂರಕ್ಷಣರಾದ ಧನಂಜಯ ಚೌಗಲಾ, ಉಪಸ್ಥಿತರಿದ್ದರು.