ವಿವಿಯಲ್ಲಿ ಬಂಜಾರ ಪೀಠ: ಕುಲಪತಿ ಪ್ರೊ. ಮುನಿರಾಜು
ವಿಜಯನಗರ,21: ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಲಂಬಾಣಿ ಕಲೆಗಳನ್ನು ಮುಖ್ಯವಾಹಿನಿಗೆ ಪರಿಚಯಿಸಲು ವಿಶ್ವವಿದ್ಯಾಲಯದಲ್ಲಿ ಬಂಜಾರ ಅಧ್ಯಯನ ಪೀಠ ಆರಂಭಿಸಲಾಗುವುದು ಎಂದು ಕುಲಪತಿ ಪ್ರೊ. ಎಂ ಮುನಿರಾಜು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಂಗಣದಲ್ಲಿ ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ, ಬೆಂಗಳೂರು ಹಾಗೂ ವಿಶ್ವವಿದ್ಯಾಲಯದ ಇಂಗ್ಲಿಷ್, ಕನ್ನಡ ಮತ್ತು ಪ್ರದರ್ಶನ ಕಲಾ ನಾಟಕ ಅಧ್ಯಯನ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ “ಬಂಜಾರ ಸಾಹಿತ್ಯ ಮತ್ತು ಬದುಕು” ಎಂಬ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕುಲಸಚಿವ ಎಸ್. ಎನ್. ರುದ್ರೇಶ್ ಮಾತನಾಡಿ, ಬುಡಕಟ್ಟು ಜನಾಂಗಗಳ ಸಂಸ್ಕೃತಿ, ಉಪಸಂಸ್ಕೃತಿಗಳ ಪೋಷಣೆಗಾಗಿ ನಾವು ಶ್ರಮಿಸುವ ಅಗತ್ಯವಿದೆ ಎಂದರು.
ಕನ್ನಡ ವಿಭಾಗದ ಡಾ. ಸೋಮಶೇಖರ ಮಾತನಾಡಿ, ಲಂಬಾಣಿ ಜನಾಂಗದಲ್ಲಿ ಮದುವೆ ಶಾಸ್ತ್ರಗಳು ವಿಶಿಷ್ಟವಾಗಿವೆ. ಬುಡಕಟ್ಟುಗಳಲ್ಲಿ ಮುಖ್ಯ ಸಂಸ್ಕೃತಿಯ ಅಡಿ ಉಪಸಂಸ್ಕೃತಿಗಳು ಹುಟ್ಟಿಕೊಂಡಿವೆ ಅವುಗಳನ್ನು ಸಂರಕ್ಷಿಸುವುದು ಇಂದಿನ ಅಗತ್ಯತೆ ಎಂದರು.
ವೇದಿಕೆಯ ಮೇಲೆ ಪ್ರಬಂಧ ಮಂಡಿಸಲಿದ್ದ ಡಾ. ಲಕ್ಷಣ ನಾಯ್ಕ್ ಬೆಳಗಲ್ಲು, ಸುರೇಶನಾಯ್ಕ್, ಮೀಟ್ಯಾನಾಯ್ಕ್ ಎಲ್ ಉಪಸ್ಥಿತರಿದ್ದರು.
ಕಲಾನಿಕಾಯದ ಡೀನರು ಮತ್ತು ಮುಖ್ಯಸ್ಥರಾದ ಪ್ರೊ. ಎಸ್ ಶಾಂತನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ಕೆ. ಎಸ್. ಶಿವಪ್ರಕಾಶ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ರಂಗನಾಥ್ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.