ಬಳ್ಳಾರಿ

ಬಳ್ಳಾರಿ: ಹಾನಿಗೊಳಗಾದ ಬೆಳೆಗಳ ಖುದ್ದು ಪರೀಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ

ಬಳ್ಳಾರಿ: ಹಾನಿಗೊಳಗಾದ ಬೆಳೆಗಳ ಖುದ್ದು ಪರೀಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ

ಲೋಕದರ್ಶನ ವರದಿ 

          ಬಳ್ಳಾರಿ,ಅ.17:   ಮಳೆ ಕೊರತೆಯಿಂದಾಗಿ ಹಾನಿಗೊಳಗಾದ ಬಳ್ಳಾರಿ ತಾಲೂಕಿನ ಹಲಕುಂದಿ ಹಾಗೂ ಬಿ.ಬೆಳಗಲ್ ಗ್ರಾಮಗಳ ಕೃಷಿ ಜಮೀನುಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ತ್ರಿಲೋಕಚಂದ್ರ ಕೆ.ವಿ ಅವರು, ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಖುದ್ದು ಪರೀಶೀಲಿಸಿದರು. 

ತೊಗರಿ ಹಾಗೂ ಮೆಣಸಿನಕಾಯಿ ಬೆಳೆಯನ್ನು ವೀಕ್ಷಿಸಿದ ಅವರು, ನೀರಿನ ಕೊರತೆಯಿಂದಾಗಿ ಬೆಳೆ ಬೆಳವಣಿಗೆ ಕುಂಠಿತಗೊಂಡಿರುವುದನ್ನು ಹಾಗೂ ಇಳುವರಿ ಗಣನೀಯವಾಗಿ ಕುಸಿಯುವ ಸಾಧ್ಯತೆಯನ್ನು ಗಮನಿಸಿದರು. ಒಣಭೂಮಿ ಪ್ರದೇಶದಲ್ಲಿ ಮಳೆಯಾಗದೆ ತೊಗರಿ ಬೆಳವಣಿಗೆ ನಿಂತಿದ್ದು, ಹೂವು ಹಾಗೂ ಕಾಯಿ ಕಟ್ಟುವ ಹಂತದಲ್ಲೇ ಗಿಡಗಳು ಬಾಡುತ್ತಿರುವುದನ್ನು ಪರೀಶೀಲಿಸಿದರು. 

*ಮಣ್ಣು ಪರೀಕ್ಷೆ ವರದಿ ವಿಳಂಬಕ್ಕೆ ಅಸಮಾಧಾನ:* 

ರೈತರಿಂದ ಸಂಗ್ರಹಿಸಿದ ಮಣ್ಣಿನ ಮಾದರಿಗಳ ಪರೀಕ್ಷೆ ಮತ್ತು ಕಾರ್ಡ್‌ ವಿತರಣೆ ತಿಂಗಳುಗಟ್ಟಲೆ ತಡವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಮಣ್ಣು ಪರೀಕ್ಷಾ ವರದಿಯನ್ನು ಲ್ಯಾಮಿನೇಷನ್ ಮಾಡಿ ಕಾರ್ಡ್‌ ಕೊಡುವುದಕ್ಕಿಂತ, ಫಲಿತಾಂಶ ಬಂದ ತಕ್ಷಣವೇ ರೈತರ ಮೊಬೈಲ್‌ಗೆ ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಸಂದೇಶ ರವಾನಿಸಬೇಕು ಎಂದು ತಾಕೀತು ಮಾಡಿದರು.


        ಬಿತ್ತನೆಗೆ ಮುಂಚೆಯೇ ಮಾಹಿತಿ ತಲುಪದಿದ್ದರೆ ಪರೀಕ್ಷೆ ನಡೆಸಿ ಪ್ರಯೋಜನವೇನು ಎಂದು ಅವರು ಪ್ರಶ್ನಿಸಿದರು. ಪ್ರಯೋಗಾಲಯಗಳ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಂಡು ನಿಗದಿತ ಗುರಿಯನ್ನು ಶೀಘ್ರವಾಗಿ ತಲುಪುವಂತೆ ಹಾಗೂ ರೈತರಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. 


ಸುದ್ದಿ ಓದಿ