ರೈತರಿಗೆ ಮಾರಕವಾಗುವ ಹೊಸ ಕಾನೂನು ಹಿಂಪಡೆಯಲು ಬಾಬಾಗೌಡಾ ಒತ್ತಾಯ
ಬೈಲಹೊಂಗಲ12: ಕೇಂದ್ರ ಸರಕಾರ ರೈತರಿಗೆ ಮಾರಕವಾಗುವ ಮೂರು ಹೊಸ ಕಾನೂನುಗಳನ್ನು ರಚಿಸಿದ್ದು ಇವುಗಳನ್ನು ಹಿಂಪಡೆಯುವಂತೆ ದೇಶ್ಯಾದ್ಯಂತ ಅನ್ನದಾತರು ಹೋರಾಟ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಗಮನ ಹರಿಸದೆ ಚಲ್ಲಾಟವಾಡುತ್ತಿದ್ದು ರೈತರ ಹೋರಾಟ ಬೆಂಬಲಿಸಲು ಕಾಂಗ್ರೆಸ್ಗೆ ಮತ ನೀಡುವ ಮೂಲಕ ಹೊಸ ಕೃಷಿ ಕಾನೂನು ವಿರೋಧಿಸಬೇಕೆಂದು ಕೇಂದ್ರ ಮಾಜಿ ಸಚಿವ ಬಾಬಾಗೌಡಾ ಪಾಟೀಲ ಮತದಾರರಲ್ಲಿ ವಿನಂತಿಸಿಕೊಂಡರು.
ಪ್ರೆಸ್ ಕ್ಲಬ್ದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಮೊದಲಿದ್ದ ಕೃಷಿಯ ಬೆಂಬಲ ಬೆಲೆಗಳನ್ನು ಬದಲಾಯಿಸಬೇಕಾಗಿದೆ. ಈ ಮೊದಲು ರೈತರು ಎತ್ತುಗಳ ಮುಖಾಂತರ ಕೃಷಿ ಮಾಡುತ್ತಿದ್ದರು. ಈಗ ನಾಲ್ಕು ಪಟ್ಟು ಬಂಡವಾಳ ಹಾಕಿ ಟ್ಯ್ರಾಕ್ಟರ ಹಾಗೂ ವಿವಿಧ ಯಂತ್ರೋಪಕರಣಗಳ ಮೂಲಕ ಕೃಷಿ ಉತ್ಪನ್ನ ಮಾಡುತ್ತಿದ್ದಾರೆ. ಇಂತಹದÀಲ್ಲಿ ಪ್ರಧಾನಿ ಮೋದಿ ಅವರು ಪೆಟ್ರೋಲ್, ಡಿಸೈಲ್, ರಾಸಾಯನಿಕ ಗೊಬ್ಬರ, ಬೀಜ, ಅನಿಲ ಮತ್ತು ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿಸಿದ್ದು ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಮಾತ್ರ ಪಾತಾಳಕ್ಕಿಳಿದಿದೆ. ಈ ವ್ಯವಸ್ಥೆಯಿಂದ ರೈತರು ದುಪ್ಪಟ್ಟು ಖರ್ಚು ಮಾಡುವ ಪರಿಸ್ಥಿತಿ ಎದುರಾಗಿದೆ ಎಂದು ಕಿಡಿ ಕಾರಿದರು.
ಕನಿಷ್ಠ ಬೆಲೆ ನಿಗದಿ ಮಾಡಿದರೆ ರೈತರು ಬದುಕುತ್ತಾರೆ. ರೈತರು ಉಳುಮೆ ಮಾಡಿ ದೇಶಕ್ಕೆ ಶೇ. 80 ರಷ್ಟು ಸಬ್ಸಿಡಿ ಕೊಟ್ಟು ಅನ್ನವನ್ನು ಕೊಟ್ಟು ರಾಷ್ಟ್ರವನ್ನು ಬದುಕಿಸುತ್ತಿದ್ದಾರೆ. ಇಂಥಹ ರೈತರನ್ನು ಕಡೆಗಣಿಸುತ್ತಿರುವ ಬಿಜೆಪಿ ಸರಕಾರಕ್ಕೆ ಎಚ್ಚರಿಕೆ ಗಂಟೆ ಕೊಡಲು ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರಿಗೆ ಮತ ನೀಡುವದರ ಮುಖಾಂತರ ರೈತ ಹೋರಾಟಕ್ಕೆ ಬೆಂಬಲಿಸಬೇಕೆಂದು ಮತದಾರರಿಗೆ ಕರೆ ನೀಡಿದರು.
ರೈತರ ಹೋರಾಟ ದೇಶದಲ್ಲಿ ಜಾಗೃತಿಗೊಳ್ಳುತ್ತಿದೆ ಎನ್ನುವದನ್ನು ಬಿಜೆಪಿ ಈಗಾಗಲೇ ಅರ್ಥ ಮಾಡಿಕೊಂಡಿದೆ. ಸೋಲು ಅನುಭವಿಸುವದು ಖಚಿತ ಎಂದು ಕೊನೆಯ ಪಕ್ಷ ಅನುಕಂಪ ಮತಗಳನ್ನು ಕೇಳುತ್ತಾ ರಾಜಕೀಯ ಅರಿಯದ ಮಂಗಳಾ ಅಂಗಡಿ ಅವರನ್ನು ಬಿಜೆಪಿ ಬಲಿಪಶು ಮಾಡುತ್ತಿದೆ ಎಂದರು. ರೈತರು ಬಿಜೆಪಿಯ ತಂತ್ರಗಾರಿಕೆ ಅರ್ಥ ಮಾಡಿಕೊಂಡು ದೊಡ್ಡ ದೊಡ್ಡ ಸಮಾವೇಶ ಹಾಗೂ ದುಡ್ಡಿಗೆ ಮೋಸ ಹೋಗದೆ ರೈತ ಕುಲದ ಸ್ವಾಭಿಮಾನದ ಕಾಂಗ್ರೆಸ್ಗೆ ಮತ ನೀಡಿ ಎಂದು ಪುನರುಚ್ಚಿಸಿದರು.
ರೈತರಿಗೆ ಮೋಸ ಮಾಡುತ್ತಿರುವ ಪ್ರಧಾನಿ ಮೋದಿ ಕಳೆದ ಚುನಾವಣೆ ಮುನ್ನ ಡಾ.ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರೂ ಸಹ ಈಡೇರಿಸಲಿಲ್ಲ. ಈಗ ರೈತರು ಹತಾಶರಾಗಿ ಕೃಷಿಯನ್ನು ತೊರೆದು ವಿವಿಧ ಕಂಪನಿಗಳಿಗೆ ತಮ್ಮ ಜಮೀನುಗಳನ್ನು ಲಾವಣಿ ಕೊಡುವಂತಹ ವಾತಾವರಣವನ್ನು ಕೇಂದ್ರ ಸರಕಾರ ಸೃಷ್ಟಿ ಮಾಡುತ್ತಿದೆ ಎಂದ ಅವರು ಮೋದಿ ಸರಕಾರವನ್ನು ಕಿತ್ತೆಸಲು ಈಗ ಉಪಚುನಾವಣೆÉ ದಿಕ್ಸೂಚಿಯಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿ ಪ್ರಧಾನಿಗೆ ಚುರುಕು ಮುಟ್ಟಿಸಬೇಕೆಂದು ತಿಳಿಸಿದರು.
ರಾಜ್ಯ ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಗೌಡಾ ಮೋದಗಿ, ಸಿಆಯ್ಟಿಯು ಜಿಲ್ಲಾಧ್ಯಕ್ಷ ವ್ಹಿ.ಪಿ.ಕುಲಕರ್ಣಿ, ಸಿಆಯ್ಟಿಯು ಜಿಲ್ಲಾ ಮುಖಂಡ ಜಿ.ಎಂ.ಜೈನೆಕಾನ್, ಪಕ್ರುದ್ದಿನ್ ನಧಾಪ್, ಮಲ್ಲಿಕಾರ್ಜುನ ಹುಂಬಿ, ಗುರುಸಿದ್ದಪ್ಪ ಕೋಟಗಿ, ಸಂಜೀವ ಪಾಟೀಲ, ನಿಂಗಪ್ಪ ಬಾಳೇಕುಂದರಗಿ, ಸೋಮು ಲಮಾಣಿ, ಅಲಿಸಾಬ್ ನಧಾಪ್, ಬಸಪ್ಪ ಕರಡಿಗುದ್ದಿ, ಬಸಪ್ಪ ಪೆಂಟೇದ. ಹೊಳೆಪ್ಪ ಬ್ಯಾಳಿ, ಸಿದ್ದಪ್ಪ ಜಳಕದ, ರವಿ ಗೌಡರ, ಬಸವರಾಜ ಕಮತಗಿ ಮುಂತಾದವರು ಇದ್ದರು.