ರಾಷ್ಟ್ರೀಯ

ರೈತರ ಭಾರತ ಬಂದ್ ಗೆ ಬಿಎಸ್ ಪಿ, ಎಸ್ ಪಿ, ಎಡ ಪಕ್ಷಗಳ ಬೆಂಬಲ; ಟ್ರ್ಯಾಕ್ಟರ್ ರಾಲಿಗೆ ಯುಪಿ ಸರ್ಕಾರ ನಿರ್ಬಂಧ

ರೈತರ ಭಾರತ ಬಂದ್ ಗೆ ಬಿಎಸ್ ಪಿ, ಎಸ್ ಪಿ, ಎಡ ಪಕ್ಷಗಳ ಬೆಂಬಲ; ಟ್ರ್ಯಾಕ್ಟರ್ ರಾಲಿಗೆ ಯುಪಿ ಸರ್ಕಾರ ನಿರ್ಬಂಧ

ಲಕ್ನೋ, ಡಿಸೆಂಬರ್ 7: ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಕರೆ ನೀಡಿರುವ   ಮಂಗಳವಾರದ ಭಾರತ್ ಬಂದ್ ಗೆ ಉತ್ತರಪ್ರದೇಶದಲ್ಲಿ ಪ್ರತಿಪಕ್ಷಗಳು ಬೆಂಬಲ ನೀಡಿವೆ. 

ಎಡ ಪಕ್ಷಗಳು ಮತ್ತು ಸಮಾಜವಾದಿ ಪಾರ್ಟಿ ಈಗಾಗಲೇ ಬಂದ್‌ಗೆ ತಮ್ಮ ಬೆಂಬಲವನ್ನು ಘೋಷಿಸಿವೆ. ಸೋಮವಾರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೂಡ ತನ್ನ ಬೆಂಬಲವನ್ನು ಪ್ರಕಟಿಸಿದೆ.

ಕೃಷಿ ಕಾನೂನುಗಳ ಬಗ್ಗೆ ಡಿಸೆಂಬರ್ 8 ರಂದು ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಅನ್ನು ಬಿಎಸ್ ಪಿ ಬೆಂಬಲಿಸಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಸೋಮವಾರ ಟ್ವೀಟ್ ಮಾಡಿದ್ದಾರೆ.

"ಕೃಷಿಗೆ ಸಂಬಂಧಿಸಿದ ಮೂರು ಹೊಸ ಕಾನೂನುಗಳನ್ನು ಹಿಂಪಡೆದುಕೊಳ್ಳಬೇಕೆಂದು ರೈತರು ದೇಶಾದ್ಯಂತ ಚಳವಳಿ ನಡೆಸುತ್ತಿದ್ದಾರೆ. ಡಿಸೆಂಬರ್ 8 ರಂದು ಕರೆ ನೀಡಿರುವ ‘ ಭಾರತ್ ಬಂದ್ಗೆ   ಬಿಎಸ್ಪಿ ಬೆಂಬಲಿಸುತ್ತದೆ” ಎಂದು ಎಂ.ಎಸ್. ಮಾಯಾವತಿ ಹೇಳಿದರು.

 ರೈತರ ಹೋರಾಟವನ್ನು ಬೆಂಬಲಿಸಿ ಎಸ್‌ ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಇಂದಿನಿಂದ ಯುಪಿ ಯಲ್ಲಿ ಟ್ರ್ಯಾಕ್ಟರ್ ರಾಲಿ ನಡೆಸುವುದಾಗಿ ಘೋಷಿಸಿದ್ದರು. ಆದರೆ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಕೋವಿಡ್ -19 ಸಾಂಕ್ರಾಮಿಕ ರೋಗದ ಕಾರಣ ನೀಡಿ  ರಾಲಿಗೆ ಅನುಮತಿ ನಿರಾಕರಿಸಿದ್ದಾರೆ.

ಲಕ್ನೋ ನಂತರ, ಕನ್ನೌಜ್ ಜಿಲ್ಲಾಧಿಕಾರಿಗಳು ಸಮಾಜವಾದಿ ಪಕ್ಷದ ಅಧ್ಯಕ್ಷರಿಗೆ ಟ್ರ್ಯಾಕ್ಟರ್ ರಾಲಿಯಲ್ಲಿ ಭಾಗವಹಿಸಲು ಅನುಮತಿ ನಿರಾಕರಿಸಿದ್ದಾರೆ. ಯಾದವ್ ಅವರು ಕನ್ನೌಜ್‌ನ ಥಾಥಿಯಾದಿಂದ ತಿರ್ವಾಕ್ಕೆ ಸುಮಾರು 13 ಕಿಲೋಮೀಟರ್ ದೂರ ಟ್ರಾಕ್ಟರ್ ನಲ್ಲಿ ಪ್ರಯಾಣಿಸಲು ನಿರ್ಧರಿಸಿದ್ದರು.

"ಬಿಜೆಪಿಯ ಆಳ್ವಿಕೆಯಲ್ಲಿ, ರೈತರು ಅತಿ ಹೆಚ್ಚಿನ ಅನ್ಯಾಯವನ್ನು ಎದುರಿಸಿದ್ದಾರೆ. ಬಿಜೆಪಿ ಸರ್ಕಾರ, ಮಂಡಿಗಳನ್ನು ಮಾರುತ್ತಿದೆ ಮತ್ತು ರೈತರಿಗೆ ಭತ್ತದ ಕನಿಷ್ಠ ಬೆಂಬಲ ಬೆಲೆ ಕೂಡ ಸಿಗುತ್ತಿಲ್ಲ. ಮಾತ್ರವಲ್ಲ ರಸಗೊಬ್ಬರ ಮತ್ತು ಕೀಟನಾಶಕಗಳ ಬೆಲೆ ಏರಿಕೆಯಾಗಿದೆ. ಬಿಜೆಪಿ ಸರ್ಕಾರ ರೈತರ ಬಗ್ಗೆ ಕಠೋರ ನಿಲುವನ್ನು ತಾಳಿದೆ ಎಂದು ಎಸ್.ಪಿ. ಹೇಳಿಕೆಯಲ್ಲಿ ತಿಳಿಸಿದೆ. 

ಸುದ್ದಿ ಓದಿ