ಮಚಿಲ್ ಸೆಕ್ಟರ್ ನಲ್ಲಿ ಹುತಾತ್ಮರಾದ ಕಾನ್ ಸ್ಟೇಬಲ್ ಗೆ ಬಿಎಸ್‌ಎಫ್ ನಿಂದ ಶ್ರದ್ಧಾಂಜಲಿ
ಶ್ರೀನಗರ, ನವೆಂಬರ್ 9: ಜಮ್ಮು-ಕಾಶ್ಮೀರದ ಉತ್ತರ ಕಾಶ್ಮೀರ ಜಿಲ್ಲೆಯಾದ ಕುಪ್ವಾರದ ಮಚಿಲ್ ಸೆಕ್ಟರ್ ನಲ್ಲಿ ಭಾನುವಾರ ಪಾಕ್ ಆಕ್ರಮಿತ ಕಾಶ್ಮೀರ ಕಡೆಯಿಂದ ಒಳನುಸುಳುವಿಕೆ
ಯತ್ನ ವಿಫಲಗೊಳಿಸಿದ ವೇಳೆ ನಡೆದ ಗುಂಡಿನಚಕಮಕಿಯಲ್ಲಿ ಹುತಾತ್ಮರಾದ ಕಾನ್ ಸ್ಟೇಬಲ್ ಗೆ
ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸೋಮವಾರ ಗೌರವ ನಮನ ಸಲ್ಲಿಸಿದೆ.
ಭಾನುವಾರ ಮಚಿಲ್ ಸೆಕ್ಟರ್ ನಲ್ಲಿ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸುವ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಕಾನ್ಸ್ ಟೇಬಲ್ ಸುದೀಪ್ ಸರ್ಕಾರ್ ಅವರಿಗೆ ಸೋಮವಾರ ಶ್ರೀನಗರ ವಿಮಾನ ನಿಲ್ದಾಣದ ಬಳಿಯ ಹಮ್ಹಾಮದಲ್ಲಿರುವ ಬಿಎಸ್‌ಎಫ್ ಕೇಂದ್ರ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಎಸ್‌ಎಫ್ ಶ್ರದ್ಧಾಂಜಲಿ ಸಲ್ಲಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಎಸ್ ಎಫ್ ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಸುರೇಂದ್ರ ಪನ್ವಾರ್ ಮತ್ತು ಇತರ ಅಧಿಕಾರಿಗಳು ರಾಷ್ಟ್ರದ ಪರವಾಗಿ ಸೈನಿಕನಿಗೆ ಗೌರವ ಸಲ್ಲಿಸಿದರು ಎಂದು ಅವರು ಹೇಳಿದರು.
ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಅವರ ಹುಟ್ಟೂರಿಗೆ ಕೊಂಡೊಯ್ಯಲಾಗುವುದು. ಅಲ್ಲಿ ಸೇನಾ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಾರ್ಯಾಚರಣೆಯ ವಿವರಗಳನ್ನು ನೀಡಿದ ಸುರೇಂದ್ರ ಪನ್ವಾರ್, ಬಿಎಸ್ಎಫ್ ಪಡೆ ಭಾನುವಾರ ಮಧ್ಯರಾತ್ರಿ ಸುಮಾರು 1 ಗಂಟೆಗೆ ಗಡಿ ನಿಯಂತ್ರಣಾ ರೇಖೆಯ ಮುನ್ನೆಲೆ ಪ್ರದೇಶಗಳಲ್ಲಿ ಗಸ್ತು ತಿರುಗುತ್ತಿತ್ತು. ಈ ವೇಳೆ ಸುದೀಪ್ ಸರ್ಕಾರ್ ಅವರನ್ನೊಳಗೊಂಡ ಪಡೆ ಅನುಮಾನ್ಪದವಾಗಿ ಚಲನ-ವಲನವನ್ನು ಗಮನಿಸಿವೆ. ಈ ವೇಳೆ ಶರಣಾಗುವಂತೆ ಸೂಚಿಸಿದಾಗ ಬಿಎಸ್ ಎಫ್ ಪಡೆ ಮೇಲೆ ಒಳನುಸುಳುಕೋರರಿಗೆ ಗುಂಡು ಹಾರಿಸಿದ್ದು, ನಂತರ ಪರಸ್ಪರ ಗುಂಡಿನ ಚಕಮಕಿ ನಡೆದಿದೆ ಎಂದು ಅವರು ಹೇಳಿದ್ದಾರೆ.
ಹುತಾತ್ಮರಾಗುವ ಮುನ್ನ ಸರ್ಕಾರ್ ಅವರು ಪ್ರತಿಯಾಗಿ ಗುಂಡು ಹಾರಿಸಿ ಒಬ್ಬ ಉಗ್ರನನ್ನು ಕೊಂದಿದ್ದಾರೆ. ಕತ್ತಲಾದ್ದರಿಂದ ಇತರ ಇಬ್ಬರು ಉಗ್ರರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬೆಳಿಗ್ಗೆ ಬೆಳಕುಹರಿಯುತ್ತಲೇ ಸೇನೆಯೊಂದಿಗೆ ಮತ್ತೆ ಜಂಟಿ ಕಾರ್ಯಾಚರಣೆ ಆರಂಭಿಸಲಾಗಿತ್ತು.
ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಅಲ್ಲದೆ, ಓರ್ವ ಸೇನಾಧಿಕಾರಿ ಸೇರಿದಂತೆ ಮೂವರು ಯೋಧರು ಹುತಾತ್ಮರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.