ಕಂಗನಾ ವಿರುದ್ಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದ ಬಿಜೆಪಿ ನಾಯಕ
ನವದೆಹಲಿ: ನ. 11: ದೇಶದ ಸ್ವಾತಂತ್ರ್ಯದ ಬಗ್ಗೆ ನಟಿ ಕಂಗನಾ ರನೌತ್ ನೀಡಿದ್ದ ಹೇಳಿಕೆಗೆ ದೆಹಲಿಯ ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ತೀವ್ರ ವಾಗ್ದಾಳಿ ನಡೆಸಿದ್ದು, ಅವರ ವಿರುದ್ಧ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ದೆಹಲಿ ಬಿಜೆಪಿ ವಕ್ತಾರರು ಮಾತನಾಡಿ, ರನೌತ್ ಅವರ ಹೇಳಿಕೆಯಿಂದ "ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ" ಮಾಡಿದಂತಾಗಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ 1947ರಲ್ಲಿ ಸಿಕ್ಕ ಸ್ವಾತಂತ್ರ್ಯ ಭಿಕ್ಷೆ (ಭೀಖ್), ನಿಜವಾದ ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿದೆ ಎಂಬ ಮಾತು ಸರಿಯಲ್ಲ. ಅವರು ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿದ್ದು, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಕ್ಕೆ ಅವಮಾನ ಮಾಡಿದ್ದಾರೆ. ಅಷ್ಟೇಅಲ್ಲದೇ ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಿಂದ ಬಂದ ನಾನು ಇದನ್ನು ಖಂಡಿಸುತ್ತೇನೆ. ಅಲ್ಲದೇ ನ್ಯಾಯಾಂಗ ತನಿಖೆಯಾಗಬೇಕು ಎಂದು ಬಿಜೆಪಿ ನಾಯಕ ಪ್ರವೀಣ್ ಶಂಕರ್ ಕಪೂರ್ ಟ್ವೀಟ್ ಮಾಡಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗ 2014 ರಲ್ಲಿ ಭಾರತಕ್ಕೆ "ನೈಜ ಸ್ವಾತಂತ್ರ್ಯ" ಸಿಕ್ಕಿತು ಮತ್ತು 1947 ರಲ್ಲಿ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯ "ಭಿಕ್ಷೆ" ಎಂದು ಕಂಗನಾ ರನೌತ್ ಹೇಳಿದ್ದರು.