ಸಂಸದ ಅನಂತಕುಮಾರ ಹೆಗಡೆ ಹೇಳಿಕೆ ಬಿಜೆಪಿ ಒಪ್ಪಲ್ಲ: ಐಹೊಳೆ
ಚಿಕ್ಕೋಡಿ 14: ದೇಶದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರದಾನಿಯಾಗುವುದು ಶತಸಿದ್ಧ, ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ, ಸಂವಿಧಾನ ಬದಲಾವಣೆ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ ಹೆಗಡೆ ಅವರ ವೈಯಕ್ತಿಕ ವಿಚಾರ. ಅದನ್ನು ಬಿಜೆಪಿ ಒಪ್ಪಿಕೊಳ್ಳುವುದಿಲ್ಲ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು. ರಾಯಬಾಗ ವಿಧಾನಸಭಾ ಕ್ಷೇತ್ರದ ಬೆಳಕೂಡ ಗ್ರಾಮದ ಹಳ್ಳಕ್ಕೆ ಅಡ್ಡಲಾಗಿ, ಸಣ್ಣ ನೀರಾವರಿ ಇಲಾಖೆಯಿಂದ ಸುಮಾರು 1.8 ಕೋಟಿ ರೂ. ವೆಚ್ಚದಲ್ಲಿ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ನೀರಾವರಿ ಸೌಲಭ್ಯ ಕಲ್ಪಿಸಿದರೆ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಮಗಾರಿ ಮಂಜೂರಾಗಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ತಡೆ ಹಿಡಿದಿತ್ತು. ಸಚಿವರ ಬಳಿ ಮನವಿ ಮಾಡಿದಾಗ ಈ ಕಾಮಗಾರಿಗೆ ಅನುಮೋಧನೆ ಕೊಟ್ಟಿದ್ದಾರೆ ಎಂದರು.
ಗ್ರಾ.ಪಂ ಅಧ್ಯಕ್ಷರಾದ ಬಸು ಕುಂಬಾರ, ಮುಖಂಡರಾದ ಸುರೇಶ ಬೆಲ್ಲದ, ಅಣ್ಣಾಸಾಹೇಬ ಖೇಮಲಾಪುರೆ, ದೇವರಾಜ ಪಾಶ್ಚಾಪುರೆ, ಮಹಾಂತೇಶ ಯಶವಂತ, ಮಹಾಂತೇಶ ಚವಾಣ್, ಬಸವನ್ನಿ ಕುಂಬಾರ, ಮಲ್ಲು ಅರಭಾವಿ, ಶಂಕರ ಗಿರಜಾಯಿ, ಸಂಭಾ ಚವಾಣ್, ನಟರಾಜ ಹಿರೇಮಠ, ದೇವಯ್ಯ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.