ಸೌಂದತ್ತಿ

ಕಾಂಗ್ರೆಸ್ ಸರಕಾರದ ವೈಫಲ್ಯತೆಗಳನ್ನು ಖಂಡಿಸಿ: ಬಿಜೆಪಿ ತಹಸೀಲ್ದಾರರಿಗೆ ಮನವಿ

ಕಾಂಗ್ರೆಸ್ ಸರಕಾರದ ವೈಫಲ್ಯತೆಗಳನ್ನು ಖಂಡಿಸಿ: ಬಿಜೆಪಿ ತಹಸೀಲ್ದಾರರಿಗೆ ಮನವಿ

ಸವದತ್ತಿ 06:  ರೈತರ ಬಗ್ಗೆ ಕಿಂಚಿತ್ತು ಚಿಂತನೆ ಇಲ್ಲದ ರಾಜ್ಯದ ಕಾಂಗ್ರೆಸ್ ಸರಕಾರವು ರೈತ ಮತ್ತು ಜನ ವಿರೋಧಿಯಾಗಿ ವರ್ತನೆ ಮಾಡುತ್ತಿದ್ದು, ಸರಕಾರವನ್ನು ಎಚ್ಚರಿಸುವ ನಿಟ್ಟಿನಲ್ಲಿ ಬಿಜೆಪಿ ಪಕ್ಷವು ಇಂದು ಹೋರಾಟವನ್ನು ಆರಂಭಿಸುತ್ತಿದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ಪಟ್ಟಣದಲ್ಲಿ ರಾಜ್ಯ ಸರಕಾರದ ಜನ ಮತ್ತು ರೈತ ವಿರೋಧಿ ಕಾಂಗ್ರೆಸ್ ಸರಕಾರದ ವಿಫಲತೆಗಳನ್ನು ಖಂಡಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಚುನಾವಣಾ ಸಮಯದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವದಕ್ಕಾಗಿ ರೈತರ ಮಕ್ಕಳ ಹಿತವನ್ನೇ ಬಲಿಕೊಟ್ಟು ರೈತ ವಿದ್ಯಾನಿಧಿಯನ್ನು, ರೈತಪರವಾದ ಭೂ ಸಿರಿ ಯೋಜನೆಯನ್ನು, ರೈತ ಸಂಪದ ಯೋಜನೆಯನ್ನು ಕೈ ಬಿಟ್ಟು ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದರು.  

ಕಾಂಗ್ರೆಸ್ ಸರಕಾರವು ಉಚಿತ ವಿದ್ಯುತ್ತ ನೀಡುವ ನೆಪದಲ್ಲಿ ಇರುವಂತ ದರವನ್ನು ದುಪ್ಪಟ್ಟು ಮಾಡಿ ರೈತರ ಪಂಪಸೆಟ್‌ಗಳಿಗೆ ವಿದ್ಯುತ್ತ ಕಟ್ ಮಾಡುತ್ತಿದ್ದು, ಈ ಸರಕಾರದ ದ್ವಂದ್ವ ನೀತಿಯನ್ನು ಬಿಜೆಪಿ ಪಕ್ಷ ಖಂಡಿಸುತ್ತಿದೆ ಎಂದರು. ಶಕ್ತಿ ಯೋಜನೆ ಜಾರಿಯಾದಾಗಿನಿಂದ ವಿದ್ಯಾರ್ಥಿಗಳು ಮತ್ತು ನೌಕರರ ಪ್ರಯಾಣಕ್ಕೆ ಕುತ್ತು ಬಂದಿದ್ದು, ಈ ಯೋಜನೆಯನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಸರಕಾರ ವಿಫಲವಾಗಿದೆ. ಕೇಂದ್ರದ ಬಿಜೆಪಿ ಸರಕಾರವು ಬಡಜನರಿಗೆ ನೀಡುತ್ತಿರುವ ಅಕ್ಕಿಯನ್ನೆ ತಾವು ನೀಡುತ್ತಿದ್ದೇವೆ ಎಂದು ಹೇಳುತ್ತಿರುವ ಕಾಂಗ್ರೆಸ್ ಸರಕಾರಕ್ಕೆ ನಾಚಿಕೆಯಾಗಬೇಕೆಂದರು. ಸುಳ್ಳು ಭರವಸೆಯ ಕಾಂಗ್ರೆಸ್ ಸರಕಾರವು ಜನರಿಗೆ ಬೇಸರವನ್ನು ಮೂಡಿಸುತ್ತಿದ್ದು, ಬರುವಂತ ಲೋಕಸಭೆ ಚುನಾವಣೆಯಲ್ಲಿ ಜನರು ಅದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದರು. 

ಬಿಜೆಪಿ ಮುಖಂಡ ವಿರುಪಾಕ್ಷ ಮಾಮನಿ ಮಾತನಾಡಿ, ಕಾಂಗ್ರೆಸ್ ಸರಕಾರ ಬಂದಾಗಿನಿಂದ ರೈತರಿಗೆ ಬಹಳ ಅನ್ಯಾಯವಾಗುತ್ತಿದ್ದು, ರಾಜ್ಯದಲ್ಲಿ ಅಭಿವೃದ್ದಿಯಂತೂ ಇಲ್ಲವೇ ಇಲ್ಲದಂತಾಗಿದೆ ಎಂದರು. ಕಾಂಗ್ರೆಸ್ ಸರಕಾರ ಜನ ವಿರೋಧಿ ನೀತಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೋರಾಟವನ್ನು ಮುಂದುವರೆಸಲಾಗುತ್ತಿದೆ ಎಂದರು. 

ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಅವರ ಹನಿಮೂನ್ ಪರೇಡ್ ಮುಗಿಯಲಿ ಎಂದು ನಾವು ಯಾವುದೆ ಡಿಸ್ಟ್ರಬ್ ಮಾಡದೆ ಹೋಗಿದ್ದು, ಈಗ ಸುಮ್ಮನಿರಲು ಸಾಧ್ಯವಿಲ್ಲ. ಸರಕಾರದ ವಿಫಲ ಯೋಜನೆಗಳ ವಿರುದ್ದ ಪ್ರತಿಭಟನೆಯನ್ನು ಆರಂಭಿಸಲಾಗುತ್ತಿದೆ ಎಂದರು. ಗ್ಯಾರಂಟಿ ಯೋಜನೆಗಳಿಗೆ ವಾರಂಟಿಯೇ ಇಲ್ಲದಾಗಿದ್ದು, ಈ ಯೋಜನೆಗಳು ಲೋಕಸಭಾ ಚುನಾವಣೆಯವರೆಗೆ ಮಾತ್ರ ಉಳಿಯಲಿವೆ ಎಂದರು. ಕಾಂಗ್ರೆಸ್ ಪಕ್ಷವು ಮಾಡುತ್ತಿರುವ ದ್ರೋಹವನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನವನ್ನು ಬಿಜೆಪಿ ಪಕ್ಷದಿಂದ ಮಾಡುತ್ತಿದ್ದೇವೆ ಎಂದರು. 

ಮಾಮನಿ ಕಲ್ಯಾಣ ಮಂಟಪದಿಂದ ಚಕ್ಕಡಿಯ ಮೇಲೆ ನಿಂತು ಪ್ರತಿಭಟನೆ ಆರಂಭಿಸಿದ ಬಿಜೆಪಿ ಕಾರ್ಯಕರ್ತರು ಮಿನಿವಿಧಾನಸೌಧಕ್ಕೆ ತೆರಳಿ ಗ್ರೇಡ್‌-2 ತಹಸೀಲ್ದಾರ ಎಮ್‌.ವಿ.ಗುಂಡಪ್ಪಗೋಳರವರಿಗೆ ಮನವಿ ಸಲ್ಲಿಸಿದರು. 

ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಚಂದರಗಿ, ಬಿ.ವಿ.ಮಲಗೌಡರ, ಜಗದೀಶ ಶಿಂತ್ರಿ, ಸುಭಾಸ ಗಿದಿಗೌಡರ, ಜಗದೀಶ ಕೌಜಗೇರಿ, ನಯನಾ ಬಸ್ಮೆ, ಸಿ.ವಿ.ಸಂಬಯ್ಯನಮಠ, ಬಾಳಪ್ಪ ಮಡಿವಾಳರ, ರಾಜು ಸಾಲಿಮಠ, ಮಲ್ಲೇಶ ಸೂಳೆಭಾವಿ, ಭರಮಪ್ಪ ಅಣ್ಣಿಗೇರಿ ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. 


ಸುದ್ದಿ ಓದಿ