ಸದನದಲ್ಲಿ ಬಿಜೆಪಿ ವರ್ತನೆ ಖಂಡನೀಯ
ತಾಳಿಕೋಟಿ 20: ಸದನದಲ್ಲಿ ಆಡಳಿತ ಕಾಂಗ್ರೆಸ್ ಪಕ್ಷವು ಮಂಡಿಸಿದ ವಿಧೇಯಕಗಳನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಪ್ರತಿಭಟಿಸುವಾಗ ತೋರಿದ ದುರ್ವರ್ತನೆಯು ಖಂಡನೀಯವಾಗಿದ್ದು ಇದು ಅಸಂಸದೀಯ ನಡವಳಿಕೆಯಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ ಎಂದು ಕಾಂಗ್ರೆಸ್ ಮುಖಂಡ ವಿಜಯಸಿಂಗ್ ಹಜೇರಿ ಹೇಳಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಬಿಜೆಪಿ ಒಂದು ಸಮರ್ಥ ವಿಪಕ್ಷವಾಗಲು ಪ್ರಯತ್ನಿಸುತ್ತಿಲ್ಲ. ಮೊದಲು ಅಧಿವೇಶನ ಮುಗಿಯುತ್ತಿದ್ದರೂ ಅದಕ್ಕೆ ಇಲ್ಲಿಯವರೆಗೆ ತನ್ನ ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಸ್ಪೀಕರ್ ಅವರು ಚರ್ಚೆಗೆ ಅವಕಾಶ ಮಾಡಿಕೊಟ್ಟರೂ ಅದನ್ನು ಸರಿಯಾಗಿ ಬಳಸಿಕೊಳ್ಳದೇ ಅನಗತ್ಯ ವಿಷಯವನ್ನು ಎತ್ತಿಕೊಂಡು, ಕೂಗಾಟ, ಚೀರಾಟವನ್ನು ಮಾಡುವುದು. ಉಪಸಭಾಧ್ಯಕ್ಷರ ಮುಂದೆ ಕಾಗದದ ತುಂಡುಗಳನ್ನು ಎಸೆಯುವುದು ಗದ್ದಲ ಎಬ್ಬಿಸಿ ಸದನದ ಅಮೂಲ್ಯ ಸಮಯವನ್ನು ಹಾಳುಮಾಡುವುದು ಬಿಜೆಪಿಯಂಥಹ ಒಂದು ರಾಷ್ಟ್ರೀಯ ಪಕ್ಷಕ್ಕೆ ಶೋಭೆ ತರುವ ವಿಷಯ ಅಲ್ಲ. ಇದು ಕನಾಟಕದ ಸದನ ಸಂಸ್ಕೃತಿಗೆ ಮಾಡುವ ಅವಮಾನ. ಇವರ ದುರ್ವರ್ತನೆ ಹಾಗೂ ಸ್ಪೀಕರ್ ಪೀಠಕ್ಕೆ ತೋರಿದ ಅಗೌರವಕ್ಕಾಗಿ 10 ಶಾಸಕರನ್ನು ಅಮಾನತ್ಗೊಳಿಸಿದ ಸ್ಪೀಕರ್ ಅವರ ಕ್ರಮ ಸಮರ್ಥನೀಯವಾಗಿದೆ ಎಂದು ಅವರು ಹೇಳಿದರು.