ರಾಣೆಬೆನ್ನೂರ

ಇಂದು ಸ್ವರಾಜ್ಯದ ಅಮೃತ ಮಹೋತ್ಸವ: ಕರ್ನಾಟಕ ವೈಭವ ವೈಚಾರಿಕ ಹಬ್ಬ

ಇಂದು ಸ್ವರಾಜ್ಯದ ಅಮೃತ ಮಹೋತ್ಸವ: ಕರ್ನಾಟಕ ವೈಭವ ವೈಚಾರಿಕ ಹಬ್ಬ

ರಾಣೇಬೆನ್ನೂರ 23: ವಾಣಿಜ್ಯ ನಗರದ ಕೆ.ಎಲ್‌.ಇ. ಶಿಕ್ಷಣ ಸಂಸ್ಥೆಯ ರಾಜ-ರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಡಿ.25ರಂದು ಶನಿವಾರ ಸಂಜೆ 5-15ಕ್ಕೆ ಅಮೃತ ಮಹೋತ್ಸವದ 75ನೇ ಸ್ವರಾಜ್ಯದ ಅಂಗವಾಗಿ ಸ್ಥಳೀಯ ಪರಿವರ್ತನಾ ಸಂಸ್ಥೆ 2020-21ನೇ ಸಾಲಿನ ಕರ್ನಾಟಕ ವೈಭವ ವೈಚಾರಿಕ ಹಬ್ಬ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಲಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕ ವೈಭವ ವೈಚಾರಿಕ ಹಬ್ಬಕ್ಕೆ ಚಾಲನೆ ನೀಡುವರು. ಸಿರಿಗೇರಿ ಬೃಹನ್ಮಠದ ಶ್ರೀ ತರಳಬಾಳು ಜಗದ್ಗುರು 1108 ಡಾಽಽ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ದಿವ್ಯ ಸಾನಿಧ್ಯ ವಹಿಸುವರು. ದಕ್ಷಿಣ ಮಧ್ಯ ಕ್ಷೇತ್ರದ ಪ್ರಜ್ಞಾ ಪ್ರವಾಹ ಸಂಯೋಜಕ ರಘುನಂದನ ಅವರು ಆಶಯ ಭಾಷಣ ಮಾಡುವರು. ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷರಾದ ಪ್ರೊ. ಎಸ್‌.ವಿ.ಹಲಸೆ ಅಧ್ಯಕ್ಷತೆ ವಹಿಸುವರು. 

ಆರಂಭಿಕ ಕಾರ್ಯಕ್ರಮವಾಗಿ ಮಮತಾ ನಾಡಿಗೇರ ಮತ್ತು ತಂಡದವರಿಂದ ಭರತ ನಾಟ್ಯ, ಜಾನಪದ ವಿದ್ವಾಂಸ ಕೆ.ಸಿ.ನಾಗರಜ್ಜಿ ಅವರ ಜನಪದ ಗೀತೆ ನಡೆಯಲಿದೆ. ಮುಕುಂದರಡ್ಡಿ ಬಣಕಾರ ತಂಡದವರಿಂದ ವೀರಗಾಸೆ, ಹೆಗ್ಗೋಡಿನ ಜ್ಯೋತಿ ಮತ್ತು ತಂಡದವರಿಂದ ಡೊಳ್ಳು ಕುಣಿತ, ನಂತರ ಬೆಂಗಳೂರ ದೃಶ್ಯ ರಂಗ ತಂಡದವರಿಂದ ‘ರಕ್ತಧ್ವಜ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪರಿವರ್ತನದ ಅಧ್ಯಕ್ಷ ಡಾ. ಎಸ್‌.ಜಿ. ವೈದ್ಯ ಕರ್ನಾಟಕ ವೈಭವ ಸಂಯೋಜಕ ಕೆ.ಎನ್‌.ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಕಾರ್ಯಕ್ರಮದಲ್ಲಿ ಯಾವುದೇ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿದ್ದು, ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೈಚಾರಿಕ ಹಬ್ಬವನ್ನು ಮತ್ತು ಸಾಂಸ್ಕೃತಿಕ ಕಲಾ ವೈಭವವನ್ನು ಸಂಭ್ರಮಿಸಲು ಕಾರ್ಯಕ್ರಮ ಆಯೋಜಕರು ಕೋರಿದ್ದಾರೆ. 


ಸುದ್ದಿ ಓದಿ