ಅಪರಾಧ ಪ್ರಕರಣಗಳು ಕಡಿಮೆಯಾಗಲು ಜನಜಾಗೃತಿ ಅಗತ್ಯ: ಮಹಾದೇವಿ ಪಳೋಟಿ
ರಾಣೇಬೆನ್ನೂರ 23: ದಿನದಿಂದ ದಿನಕ್ಕೆ ನಗರ ಪ್ರದೇಶಗಳು ಬೆಳವಣಿಗೆ ಕಾಣುತ್ತಿರುವುದು ಸಹಜ. ಏನೇನೋ ಕಾರಣಗಳಿಂದ ನಿತ್ಯವೂ ಒಂದಿಲ್ಲೊಂದು ರೀತಿಯಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಲೇ ಸಾಗುತ್ತಿವೆ. ಇದಕ್ಕೆಲ್ಲ ಕಾರಣ ನಮ್ಮಲ್ಲಿರುವ ಕಾನೂನಿನ ತಿಳುವಳಿಕೆಯ ಕೊರತೆ. ಪ್ರತಿಯೊಬ್ಬ ನಾಗರಿಕರು ಈ ದೇಶದ ಕಾನೂನಿನ ಜ್ಞಾನವನ್ನು ಅರಿತುಕೊಂಡು ನಡೆದರೆ ಯಾವುದೇ ಕಾರಣಕ್ಕೂ ಅಪರಾಧಿಗಳು ಇರುವುದಿಲ್ಲ. ಅಪರಾಧವೂ ಸಹ ನಡೆಯುವುದಿಲ್ಲ. ಅದಕ್ಕಾಗಿ ವಿದ್ಯಾರ್ಥಿ ಸಮುದಾಯ ಸಮಾಜದಲ್ಲಿ ಶಾಂತಿ ಮತ್ತು ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಾದ ಅಗತ್ಯವಿದೆ ಎಂದು ಸಂಚಾರಿ ಪೊಲೀಸ್ ಠಾಣಾ ಎಸ್ಐ ಮಹಾದೇವಿ ಪಳೋಟಿ ಹೇಳಿದರು.
ಅವರು ನಗರ ಹೊರ ವಲಯದ ಆರ್.ಟಿ.ಈ.ಎಸ್. ಕಾಲೇಜು ಸಾಹುಕಾರ ಸಭಾ ಭವನದಲ್ಲಿ ಕಾಲೇಜು ಮತ್ತು ಎನ್ಎಸ್ಎಸ್ ಘಟಕ, ಜಿಲ್ಲಾ ಪೊಲೀಸ್ ಶಹರ ವೃತ್ತ, ಸಂಚಾರಿ ಪೊಲೀಸ್ ಠಾಣೆ ಸಂಯುಕ್ತವಾಗಿ ಆಯೋಜಿಸಿದ್ದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಾರತದ ಭವಿಷ್ಯ ಈ ದೇಶದ ಯುವ ಜನಾಂಗದ ಮೇಲಿದೆ. ಎಲ್ಲ ಹಿರಿಯರು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರ ಯುವಕರ ಮೇಲೆ ಸಂಪೂರ್ಣ ಭರವಸೆ ಇಟ್ಟಿದೆ. ಯುವ ಸಮುದಾಯ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಹುದು ಎನ್ನುವುದಕ್ಕೆ ದೇಶದಲ್ಲಿ ಇಂದು ಕಾಣುತ್ತಿರುವ ವೈಜ್ಞಾನಿಕ ತಂತ್ರಜ್ಞಾನ ಸಾಧನೆಯೇ ಸಾಕ್ಷಿಯಾಗಿದೆ ಎಂದ ಅವರು, ಇಂತಹ ಕಾರ್ಯಕ್ರಮಗಳು ಎಲ್ಲ ಭಾಗಗಳಲ್ಲಿಯೂ ಆಯೋಜಿಸಲು ಸ್ಥಳೀಯ ಸಂಘ-ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸ್ವಯಂ ಪ್ರೇರಣೆಯಿಂದ ಮುಂದಾದಾಗ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗಲು ಸಾಧ್ಯವಾಗುವುದು ಎಂದರು.
ರಾಣೇಬೆನ್ನೂರು ತಾಲೂಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಭಾಸ ವ್ಹಿ ಸಾವುಕಾರ ಅವರು ಉದ್ಘಾಟಿಸಿ ಚಾಲನೆ ನೀಡಿದರು. ಕಾಲೇಜು ಪ್ರಾಚಾರ್ಯ ಎಫ್.ಎಚ್. ಮಾಚೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ.ಸರಸ್ವತಿ.ಎಚ್.ಬಮ್ಮನಾಳ, ಐಕ್ಯೂಎಸಿ ಸಂಯೋಜಕ ಡಾ.ಮಧುಕುಮಾರ.ಆರ್., ಡಾ. ಸ್ವಪ್ನಾ ಮುದಗಲ್ ಸೇರಿದಂತೆ ಉಪನ್ಯಾಸಕರು, ಎನ್ಎಸ್ಎಸ್ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.