ರೂಪಾಂತರಿ ಕರೋನಾ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ
ಬೈಲಹೊಂಗಲ 4: ದೇಶದಲ್ಲಿ ಕೊರೊನಾ 2ನೇ ಅಲೆ ಹಾವಳಿ ಹೆಚ್ಚಾಗಿದ್ದು ಪ್ರತಿಯೊಬ್ಬರೂ ಆರೋಗ್ಯದ ಹಿತದೃಷ್ಟಿಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಿಪಿಐ ವಸಂತ ಪಾಟೀಲ ಹೇಳಿದರು.
ಅವರು ಶನಿವಾರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ತಾಲೂಕಾ ಆಡಳಿತ, ಪೊಲೀಸ್ ಇಲಾಖೆ, ಪುರಸಭೆ ಮತ್ತು ಆರೋಗ್ಯ ಇಲಾಖೆ ಇವರ ಸಹಯೋಗದಲ್ಲಿ ಕರೋನಾ ರೂಪಾಂತರಿ ಕರೋನಾ 2 ನೇ ಅಲೆ ವಿರುದ್ಧ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಕೊರೊನಾ ಸೋಂಕು ಬೇರೆಯವರಿಗೆ ಹರಡದಂತೆ ತಡೆಯುವಲ್ಲಿ ಮಾಸ್ಕ್ ಉಪಯುಕ್ತವಾಗುತ್ತದೆ. ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ರೂಪಾಂತರಿ ಕೊರೊನಾ ಸಾಮಾನ್ಯವೆಂದು ಭಾವಿಸದೇ ಎಚ್ಚರಿಕೆ ಕಾಯ್ದುಕೊಳ್ಳುವುದು ತುಂಬಾ ಮುಖ್ಯ. ಕೊರೊನಾ ರೂಪಾಂತರಿ ವೈರಸ್ ಅಲೆ ಹರಡುವಿಕೆ ಜೋರಾಗಿದ್ದು ಸಾರ್ವಜನಿಕ ಸ್ಥಳಗಳು, ಉದ್ಯಾನವನಗಳು, ಮಾರುಕಟ್ಟೆಗಳಲ್ಲಿ ಮಾಸ್ಕವಿಲ್ಲದೇ ಸಂಚರಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿಎಸ್ಐ ವಸಂತ ಬಂಡಗಾರ, ಬಿ.ಆಯ್.ಗುಡಿಮನಿ, ಸುರೇಶ ಪಾಟೀಲ, ಸೋಮು ಕರವೀರನವರ, ಡಿ.ಎಸ್.ದರಗದ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಸಾರ್ವಜನಿಕರು ಇದ್ದರು.