ಕಲಾವಿದ ಸಮಾಜಕ್ಕೆ ಸುಗಂದ ಬಿರುವ ಹೂವು: ಶಂಕರ ಹಲಗತ್ತಿ
ರಾಣೆಬೆನ್ನೂರ 07: ನಗರದ ಕಾಗದ ಸಾಂಗತ್ಯ ವೇದಿಕೆಯು ಆಯೋಜಿಸಿದ ಕಾಗದ ಸಾಂಗತ್ಯ ಕಲಾ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಟಿ ಕಾರ್ಯಕ್ರಮವು ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಇತ್ತಿಚೇಗೆ ನಡೆಯಿತು.
ವಿಶೇಷ ಆಹ್ವಾನಿತರಾಗಿದ್ದ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಮಾಜಿ ಅಧ್ಯಕ್ಷ, ಚಿಂತಕ ಶಂಕರ ಹಲಗತ್ತಿ ಅವರು ಪ್ರಶಸ್ತಿ ನೀಡಿ ಮಾತನಾಡಿ, ಕಲಾವಿದ ಕಷ್ಟಕೋಟೆಯ ಬಿರುಕಿನಲ್ಲಿ ಅರಳಿ ನಿಂತು ಸಮಾಜಕ್ಕೆ ಸುಗಂಧ ಬೀರುವ ಹೂವು, ಕಲಾವಿದ ಯಾವಾಗಲೂ ಸಮಾಜಮುಖಿ.ತಮ್ಮ ಸುತ್ತಲ ಬದುಕನ್ನು ಪ್ರೀತಿಸುವ, ಸೂಕ್ಷ್ಮ ದೃಷ್ಟಿಯಿಂದ ನೋಡುವ ಈ ಚಿತ್ರಕಾರರಿಗೆ, ಸಾಮಾನ್ಯರಿಗೆ ಕಾಣದ್ದು ಇವರಿಗೆ ಕಾಣುತ್ತದೆ. ಪ್ರತಿಯೊಂದು ಪ್ರಸಿದ್ಧಿಯ ಹಿಂದೆ ತನ್ನದೇ ಆದ ಶ್ರಮ ಅಡಗಿರುತ್ತದೆ. ಕಲಾವಿದರಿಗೆ ವೇದಿಕೆಗಳು ಕಡಿಮೆಯಾಗುತ್ತಿರುವುದು ವಿಷಾಧಕರ ಸಂಗತಿಯಾಗಿದೆ ಎಂದರು.
ಕಲಾವಿದರು ಯಾವಾಗಲೂ ಹೊಸತನ್ನು ಹುಟ್ಟುಹಾಕುತ್ತಾರೆ. ಕಲೆ,ಸಾಹಿತ್ಯ ಪ್ರತಿಭೆಗಳಿಗಾಗಿ ಹಳೆಯದನ್ನು ಮುರಿದು ಹೊಸತನ್ನು ಕಟ್ಟುವ,ಈ ರೀತಿಯ ಕಾರ್ಯಕ್ರಮಗಳು ಜನರ ಮಧ್ಯ ಹೆಚ್ಚು ಹೆಚ್ಚು ನಡೆಯಬೇಕಾಗಿದೆ. ಅಂದಾಗ ಜನರಿಗೆ ಮನವರಿಕೆಯಾಗಿ ಕಲೆ, ಕಲೆಗಾರರು ಉಳಿಯುವಂತಹ ವಾತಾವರಣ ನಿರ್ಮಾಣವಾಗುತ್ತವೆ. ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಕಲಾವಿದರ ಪಾತ್ರ ಬಹಳ ಪ್ರಮುಖವಾಗಿರುತ್ತದೆ. ಕಾಗದ ಸಾಂಗತ್ಯ ವೇದಿಕೆ ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಕವಿ ಸತೀಶ ಕುಲಕರ್ಣಿ ಅವರು ಕಲೆ ಅಲಂಕರಣ ಸಾಮಗ್ರಿಯಲ್ಲ. ಗೋಡೆಯ ಚಂದಕ್ಕೆ ತೂಗು ಹಾಕುವ ಚಿತ್ರಪಟವಲ್ಲ. ರಮಣೀಯ ಕಥಾನಕ, ಮನೋಹರ ದೃಶ್ಯಾವಳಿಯೂ ಅಲ್ಲ. ಕಲೆ ಒಂದು ನಮ್ಮ ಭಾವನೆಗಳನ್ನು ಎಚ್ಚರಿಸುವಂತದ್ದು, ಅರಳಿಸುವಂತದ್ದು. ವ್ಯಕ್ತಿತ್ವ ವಿಕಸನ ಗೊಳಿಸುವಂತಹ ಶಕ್ತಿ ಈ ಚಿತ್ರಕಾರರಲ್ಲಿದೆ, ಇದು ಚಿತ್ರ ಕಲಾವಿದರಿಗೆ ಅಕ್ಷರ ಸಹ ಅನ್ವಯಿಸುತ್ತವೆ. ಏಕಾಂತ ಬಯಸುವ ಮನಸ್ಸು ನಿಸರ್ಗದತ್ತ ಹೊರಳುತ್ತದೆ. ನಿಸರ್ಗದ ಸಾಮಿಪ್ಯ ಮನುಷ್ಯನನ್ನೇ ಬದಲಿಸುತ್ತದೆ. ನಿಸರ್ಗದತ್ತ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡ ಕಲಾವಿದರು ಕ್ಯಾನ್ವಾಸ್ ಮೇಲೆ ಸೃಷ್ಟಿಸಿದ ಚಿತ್ರಗಳು ನೋಡುಗರನ್ನು ಒಂದು ಕ್ಷಣ ಭಾವನಾ ಲೋಕಕ್ಕೆ ಕರೆದೊಯ್ಯುತ್ತವೆ ಎಂದರು.
ರಾಜ್ಯ ಪ್ರಶಸ್ತಿ ವಿಜೇತ ಜಾನಪದ ವಿದ್ವಾಂಸ ಕೆ.ಸಿ.ನಾಗರಜ್ಜಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, .ಈ ದುರುಳ ಸಮಯದಲ್ಲಿ ಕಲಾವಿದರು ನಿಕೃಷ್ಟ ಜೀವನ ಸಾಗಿಸುತ್ತಿದ್ದಾರೆ. ತಲೆತಲಾಂತರಗಳಿಂದ ಬಂದ ಜಾನಪದ ಕಲೆ, ಚಿತ್ರಕಲೆಗಲು ಜನರ ಬದುಕಿನ ಹತ್ತಿರ ಕಲೆಗಳಾಗಿವೆ. ಜಾತಿ,ಕುಲವೆನ್ನದೇ ಕಲಾವಿದ ಸಮಾಜಮುಖಿಯಾಗಿ ತಮ್ಮ ಕಲಾಪ್ರದರ್ಶನ ನೀಡಬೇಕೆಂದರು.
ಪ್ರಶಸ್ತ್ತಿ ಪುರಸ್ಕೃತ ವಿಜಯ ಕಿರೇಸೂರ, ಕಾಗದ ಸಾಂಗತ್ಯ ವೇದಿಕೆಯ ಅಧ್ಯಕ್ಷ ಕಲಾವಿದ ನಾಮದೇವ ಕಾಗದಗಾರ, ಕವಿ ಎ.ಎಸ್.ಮಕಾನದಾರ, ಬಸವರಾಜ ಸಾವಕ್ಕನವರ,ದೇವ ರಾಜ ಹುಣಸಿಕಟ್ಟಿ, ದಾಕ್ಷಾಯಣಿ ಉದಗಟ್ಟಿ ರಾಘವೇಂದ್ರ ನಾಯಕ, ಸುಖದೇವ ಕಾಂಬಳೆ, ಗುರುಮೂರ್ತಿ ಗುರುಪಾದದೇವರಮಠ, ಅರವಿಂದ ಆಲದಕಟ್ಟಿ, ಶಾಂತರಾಜ ಹೆಚ್, ಜಬಿವುಲ್ಲಾ ಅಸಾದ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕು.ಗೌತಮ್ ಸಾವಕ್ಕನವರ ಸ್ಯಾಕ್ಸೋಫೋನ್ ವಾದನ, ಪ್ರೀತಮ್ ಸಾವಕ್ಕನವರ, ಚಿನ್ಮಯಿ ಮಳಿಮಠ ಇವರಿಂದ ತಬಲಾ ವಾದವನ, ರಕ್ಷಿತ್ ಸಾವಕ್ಕನವರ ರಿಧಮ್ ವಾದನ ಗಮನಸೆಳೆಯಿತು. ಚಿತ್ರಕಲಾ ಸ್ಪಧೇಯಲ್ಲಿ ವಿಜೇತರಾದ ಗ್ರೀಷ್ಮಾ ಗುಡ್ಡದ, ನಾಗರಾಜ ಗಾಜೇರ, ಪ್ರತೀಕ್ಷಾ ನಾಯಕ, ನಾಗರತ್ನಾ ಮಾಷ್ಠಿ, ಅಶ್ವಿನಿ ಸಿಡೇನೂರ ಇವರುಗಳಿಗೆ ಬಹುಮಾನ ನೀಡಲಾಯಿತು. ಅಲ್ಲದೇ ದೇವರಾಜ ಹುಣಸಿಕಟ್ಟಿ, ಪ್ರಶಾಂತ ಅಂಗಡಿ,ದಾಕ್ಷಾಯಣಿ ಉದಗಟ್ಟಿ ರಮೆಶ ಬಡಿಗೇರ, ಸುರೇಶ ಮಲ್ಲಾಡದ, ಪ್ರಭಾಕರ ಶಿಗ್ಲಿ, ಲಲಿತಾ ಗೊಗ್ಗದ,ಸುನಿತಾ ಹೊಸಳ್ಳಿ, ಲಕ್ಷ್ಮೀ ಅಡಿಕೆ,ಮಂಜುಳಾ ಹಿರೇಬಿದರಿ,, ಜಬಿವುಲ್ಲಾ ಅಸಾದ್ ಇವರು ಸ್ವ ರಚಿತ ಕವನ ವಾಚಿಸಿದರು. 2020ನೇ ಸಾಲಿನ ಕಾಗದ ಸಾಂಗತ್ಯ ಕಲಾ ಪ್ರಶಸ್ತಿಯನ್ನು ಗದಗ ಜಿಲ್ಲೆಯ ನೀರಲಗಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ, ಗದಗ ನಗರದ ಬಣ್ಣದ ಮನೆ ಆರ್ಟ ಅಡ್ಡಾದ ಕಲಾವಿದ ವಿಜಯಮಹಾಂತೇಶ ಕಿರೇಸೂರ ಇವರಿಗೆ ನೀಡಿ ಗೌರವಿಸಲಾಯಿತು.