ಬಳ್ಳಾರಿ

ಸ್ಮಶಾನಭೂಮಿ ಒತ್ತುವರಿಗೆ ಯತ್ನ: ರಾಮಾಂಜಿನೇಯಲು ಆರೋಪ

ಸ್ಮಶಾನಭೂಮಿ ಒತ್ತುವರಿಗೆ ಯತ್ನ: ರಾಮಾಂಜಿನೇಯಲು  ಆರೋಪ

ಬಳ್ಳಾರಿ ಫೆ 26: ನಗರ ಪಾಲಿಕೆ 9ನೇ ವಾರ್ಡಿನಲ್ಲಿರುವ ಡಿಸಿ ಕಾಲೋನಿ ವ್ಯಾಪ್ತಿಯಲ್ಲಿ ಸರ್ಕಾರದಿಂದ ಸ್ಮಶಾನಕ್ಕೆಂದು ನೀಡಲಾಗಿರುವ 2 ಎಕರೆ ಜಮೀನಿನಲ್ಲಿ ವೈ.ಬಿ.ಸೀತಾರಾಮ್ ಅವರು ಒತ್ತುವರಿ ಮಾಡಲು ಹೊರಟಿದ್ದಾರೆ ಎಂದು ಮಹಾನಗರ ಪಾಲಿಕೆ ಸಾಮಾಜಿಕ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರು, ಕಾಂಗ್ರೆಸ್ ಮುಖಂಡರೂ ಆದ ರಾಮಾಂಜಿನೇಯಲು ಅವರು ಆರೋಪಿಸಿದ್ದಾರೆ.  

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ಕಳೆದ 1999ರಲ್ಲಿ ಅಂದಿನ ಜಿಲ್ಲಾಧಿಕಾರಿ ಗೌರಿ ತ್ರಿವೇದಿ ಅವರು ಸ್ಮಶಾನಕ್ಕೆಂದು 2 ಎಕರೆ ಜಮೀನು ಒದಗಿಸಿದ್ದರು. 8 ಮತ್ತು 9ನೇ ವಾರ್ಡಿನ ಶವಗಳನ್ನು ಇಲ್ಲಿ ತಂದು ಹೂಳಲಾಗುತ್ತಿತ್ತು. 2018ರಲ್ಲಿ ವೈ.ಬಿ.ಸೀತಾರಾಮ್ ಅವರು ಸ್ಮಶಾನವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದವರ ಮೇಲೆ ದೌರ್ಜನ್ಯ, ಕೊಲೆ ಬೆದರಿಕೆ ಒಡ್ಡುತ್ತಿದ್ದಾರೆ. ಇತ್ತೀಚೆಗೆ ಮಹಾನಗರ ಪಾಲಿಕೆಯಿಂದ ಅನುಮೋದನೆಯಂತೆ ಸ್ಮಶಾನದ ಸುತ್ತಲೂ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ರೂ.15 ಲಕ್ಷ ಅನುದಾನ ಬಿಡುಗಡೆಯಾಗಿತ್ತು. ಪಾಲಿಕೆಯ ಅಧಿಕಾರಿಗಳು ತಡೆಗೋಡೆ ನಿರ್ಮಾಣಕ್ಕೆ ಮತ್ತು ಸ್ಮಶಾನ ಸ್ವಚ್ಛಗೊಳಿಸಲು ತೆರಳಿದರೆ ವೈ.ಬಿ.ಸೀತಾರಾಮ್ ಅಡ್ಡಿಪಡಿಸುತ್ತಿದ್ದಾರೆ ಎಂದರು. 

ಜೆಸಿಬಿ ಯಂತ್ರಗಳು ಮತ್ತು ಅಧಿಕಾರಿಗಳನ್ನು ವಾಪಸ್ಸು ಕಳುಹಿಸುತ್ತಿದ್ದಾರೆ. ಇವರ ಹಿಂದೆ ಸ್ಥಳೀಯ ಶಾಸಕರ ಕುಮ್ಮಕ್ಕೂ ಇದೆ ಎಂದು ಅವರು ಆರೋಪಿಸಿದರು. ನಾನು ಸ್ಥಳೀಯ ಪಾಲಿಕೆ ಸದಸ್ಯನಾಗಿರುವುದರಿಂದ ಜನರ ಯೋಗ ಕ್ಷೇಮ ನೋಡಿಕೊಳ್ಳಲು ವಾರ್ಡ್ವಾರು ಭೇಟಿ ನೀಡಿದಾಗ ಸಹಜವಾಗಿ ನಾಗರಿಕರಿಂದ ಕುಡಿಯುವ ನೀರು, ಪೈಪ್ ಲೈನ್, ವಿದ್ಯುತ್ ದೀಪ ಅಳವಡಿಕೆ ಇತ್ಯಾದಿ ಬೇಡಿಕೆಗಳು ಬರುತ್ತಿವೆ. ಜನರ ಅಹವಾಲು ಆಲಿಸಿ ಅವುಗಳನ್ನು ಈಡೇರಿಸುವುದು ನನ್ನ ಜವಾಬ್ದಾರಿ. ಅದೇರೀತಿ, ಸದರಿ ಸ್ಮಶಾನದ ಸ್ವಚ್ಛತೆ ಹಾಗೂ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಮುಂದಾದರೆ ನನ್ನ ಮೇಲೆ ದೌರ್ಜನ್ಯ ಮಾಡಿದ್ದಲ್ಲದೇ, ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿ ಸುಳ್ಳು ದೂರು ನೀಡಿದ್ದಾರೆ. ವೈ.ಬಿ.ಸೀತಾರಾಮ್ ಅವರೊಂದಿಗೆ ವೆಂಕಟೇಶ್, ರಾಮಾಂಜಿನಿ ಮತ್ತು ಗೋವಿಂದ ಎನ್ನುವವರು ಕೂಡ ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದರು. ಇತ್ತೀಚೆಗೆ ಸ್ಮಶಾನ ರಕ್ಷಣಗೆ ತೆರಳಿದ್ದ ವೆಂಕಟೇಶುಲು ಮೇಸ್ತ್ರಿ ಹಾಗೂ ಮಾರೆಪ್ಪ ಅವರನ್ನೂ ಕೊಲೆ ಬೆದರಿಕೆ ಒಡ್ಡಿದ್ದರಿಂದ ನಗರಕ್ಕೆ ಭೇಟಿ ನೀಡಿದ್ದ ಎಡಿಜಿಪಿ ಅಲೋಕ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ವೈ.ಬಿ.ಸೀತಾರಾಮ್ ಅವರ ವಿರುದ್ಧ ದೂರು ನೀಡಲಾಗಿದೆ. ಸೋಮವಾರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮತ್ತೆ ಎಲ್ಲ ವಿವರಣೆಗಳನ್ನು ನೀಡಿ ರಕ್ಷಣೆಗೆ ಮನವಿ ಮಾಡಲಾಗುತ್ತದೆ ಎಂದರು.  

ಸರ್ಕಾರದ ಜಮೀನನ್ನು ಸಾರ್ವಜನಿಕವಾಗಿ ಉಳಿಸಿಕೊಳ್ಳಲು ನ್ಯಾಯಯುತವಾಗಿ ಹೋರಾಟ ಮಾಡುತ್ತಿರುವ ನಮಗೆ ದೌರ್ಜನ್ಯ, ಸುಳ್ಳು ಕೇಸು ದಾಖಲೆ ಮತ್ತು ಪ್ರಾಣ ಬೆದರಿಕೆ ಒಡ್ಡುತ್ತಿರುವುದರಿಂದ ಆತಂಕ ಎದುರಾಗಿದೆ. ನಮಗೇನಾದರೂ ವೈ.ಬಿ.ಸೀತಾರಾಮ್ ಅವರೇ ನೇರ ಕಾರಣವೆಂದು ಹೇಳಿದರು.   

ಮಹಾನಗರ ಪಾಲಿಕೆ ಮಾಜಿ ಮೇಯರ್ ವೆಂಕಟರಮಣ, ಪಾಲಿಕೆ ಸದಸ್ಯರಾದ ಎಂ.ಪ್ರಭಂಜನ್, ಎಂ.ನಂದೀಶ್, ಪಿ.ಗಾದೆಪ್ಪ, ನೂರ್, ಕಾಂಗ್ರೆಸ್ ಮುಖಂಡರಾದ ಸೂರಿ, ಅಯಾಜ್ ಅಹ್ಮದ್ ಇತರರು ಉಪಸ್ಥಿತರಿದ್ದರು. 


ಸುದ್ದಿ ಓದಿ