ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ.. ಹೊಸ ತನಿಖಾಧಿಕಾರಿ
ಮುಂಬೈ ನ 6: ದೇಶಾದ್ಯಂತ ಸಂಚಲನ ಮೂಡಿಸಿರುವ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಹೊಸ ತನಿಖಾಧಿಕಾರಿ ಸಂಜಯ್ ಕುಮಾರ್ ಸಿಂಗ್ ಅವರ ತನಿಖಾ ಇತಿಹಾಸ ಬೆಚ್ಚಿ ಬೀಳಿಸುವಂತಿದೆ.
ಸಂಜಯ್ ಕುಮಾರ್ ಸಿಂಗ್ ಒಡಿಶಾ ಪೊಲೀಸ್ ಇಲಾಖೆ, ಕೇಂದ್ರೀಯ ತನಿಖಾ ದಳ (ಸಿಬಿಐ)ದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಹಿಂದೆ ಹಲವು ಅಂತಾರಾಷ್ಟ್ರೀಯ ಡ್ರಗ್ ದಂಧೆಗಳನ್ನು ಬಯಲಿಗೆಳೆದ ಸಮರ್ಥ ಅಧಿಕಾರಿ ಎಂದು ಹೆಸರುವಾಸಿಯಾಗಿದ್ದಾರೆ. ಸಮೀರ್ ವಾಂಖೆಡೆ ನೇತೃತ್ವದ ತಂಡ ಕಳೆದ ಅಕ್ಟೋಬರ್ 3 ರಂದು ದಾಳಿ ನಡೆಸಿದ್ದ ಕ್ರೂಸ್ ಡ್ರಗ್ ಪ್ರಕರಣದ ವಿಶೇಷ ತನಿಖಾ ತಂಡದ ನೇತೃತ್ವವನ್ನು ಉಪ ಮಹಾ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ವಹಿಸಲಿದ್ದಾರೆ.
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ವಿರುದ್ಧದ ಡ್ರಗ್ಸ್ ಪ್ರಕರಣ ಸೇರಿದಂತೆ ಆರು ಪ್ರಕರಣಗಳನ್ನು ಸಮೀರ್ ವಾಂಖೆಡೆ ನೇತೃತ್ವದ ಮುಂಬೈ ವಲಯದಿಂದ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ವರ್ಗಾಯಿಸಿದೆ.
ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಹಾಗೂ ಇತರರು ಆರ್ಯನ್ ಖಾನ್ ಪ್ರಕರಣದಲ್ಲಿ ಭ್ರಷ್ಟಾಚಾರ, ಅಕ್ರಮಗಳು ನಡೆಸಿದ್ದಾರೆಂಬ ಆರೋಪಗಳ ಬಗ್ಗೆ ಎನ್ ಸಿ ಬಿ ವಿಚಕ್ಷಣಾ ತಂಡ ತನಿಖೆ ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಸಂಜಯ್ ಕುಮಾರ್ ಸಿಂಗ್ 1996 ರ ಬ್ಯಾಚ್ ಒಡಿಶಾ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಎನ್ ಸಿ ಬಿ ಸೇರುವ ಮುನ್ನ ಒಡಿಶಾ ಪೊಲೀಸ್ ಡ್ರಗ್ ಟಾಸ್ಕ್ ಫೋರ್ಸ್ (DTF) ನ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆಸಲ್ಲಿಸಿದ್ದರು. ಡಿಟಿಎಫ್‌ನಲ್ಲಿದ್ದಾಗ, ಸಿಂಗ್ ಒಡಿಶಾದಲ್ಲಿ ಡ್ರಗ್ ವಿರೋಧಿ ಕಾರ್ಯಾಚರಣೆಗಳನ್ನು ಆರಂಭಿಸಿದ್ದರು.