ರಾಣೆಬೆನ್ನೂರ

ಗ್ರಾಮೀಣ ಪ್ರದೇಶಗಳ ಭಾವೈಕ್ಯತೆಗೆ ಕಲೆ-ಕಲಾವಿದರು ಅಗತ್ಯ: ಅರುಣಕುಮಾರ ಪೂಜಾರ

ಗ್ರಾಮೀಣ ಪ್ರದೇಶಗಳ ಭಾವೈಕ್ಯತೆಗೆ ಕಲೆ-ಕಲಾವಿದರು ಅಗತ್ಯ: ಅರುಣಕುಮಾರ ಪೂಜಾರ

ರಾಣೇಬೆನ್ನೂರ 20: ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಗ್ರಾಮೀಣ ಕಲೆಗಳು ಜನರ ಬದುಕಿನ ಜೀವನಾಡಿಯಾಗಿ ಹಾಸು ಹೊಕ್ಕಾಗಿ ಸಾಗಿ ಬಂದಿದೆ. ಗ್ರಾಮೀಣ ಪ್ರದೇಶಗಳು ಜನಪದ ಕಲೆಗಳ ತವರೂರಾಗಿ ವಿಜೃಂಭಿಸುತ್ತಿರುವುದು ತಾಲೂಕಿಗೆ ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಶಾಸಕ ಅರುಣಕುಮಾರ ಪೂಜಾರ ಹೇಳಿದರು. 

ಅವರು ತಾಲೂಕಿನ ಕಲಾವಿದರ ತವರೂರಾದ ಕುಪ್ಪೇಲೂರ ಗ್ರಾಮದ ಮಾರುತಿ ರಂಗ ಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರ, ಸ್ಥಳೀಯ ರಂಗಚೇತನ (ಪ.ಜಾ) ಸಂಸ್ಥೆ ಆಯೋಜಿಸಿದ್ದ ಸಾಂಸ್ಕೃತಿಕ ಕಲಾವೈಭವ ಜನಪದ ಸಂಸ್ಕೃತಿ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ನಮ್ಮ ಯುವ ಜನಾಂಗ ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗುತ್ತಿದೆ. ಇದರಿಂದ ಕ್ಷಣಿಕ ಸುಖ ಸಿಗಬಹುದು. ಆದರೆ, ಬದುಕಿನ ಸಂದೇಶದ ಜೊತೆಗೆ ಶಾಸ್ವತ ಸುಖ ನೀಡುವ ಕಲೆಯೆಂದರೆ ಅವು ಗ್ರಾಮೀಣ ಕಲೆಗಳಿಂದ ಮಾತ್ರ ಸಾಧ್ಯ ಎಂದ ಅವರು, ಗ್ರಾಮೀಣ ನಾಗರಿಕರು ತಮ್ಮ ಗ್ರಾಮ ಪ್ರಾದೇಶಿಕವಾಗಿರುವ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವುದರ ಮೂಲಕ ಸಹಕಾರ ನೀಡಬೇಕು. ಇದರಿಂದ ಕಲಾವಿದರು. ಅವರಲ್ಲಿರುವ ಕಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳುವುದು ಸಾಧ್ಯವಾಗುವುದು ಎಂದರು. 

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಿಲ್ಪಾ ಸುಧಾಕರ ಮರಳಪ್ಪನವರ ಅವರು ಮಾತನಾಡಿ, ಗ್ರಾಮೀಣ ಕಲೆಗಳು ಇಂದು ಮರೆಯಾಗುತ್ತಿವೆ. ಅವುಗಳು ಶಾಸ್ವತವಾಗಿ ಮುಂದುವರೆಯಬೇಕಾದರೆ ಕಲಾವಿದರು ಉಳಿಯಬೇಕು. ಅದಕ್ಕೆ ಸರ್ವರ ಸಹಕಾರ ಅಗತ್ಯ ಬೇಕಾಗುತ್ತದೆ ಎಂದ ಅವರು, ಪಂಚಾಯಿತಿಯಿಂದ ಯಾವುದೇ ಕಾರ್ಯಕ್ರಮವಿರಲಿ ಅವುಗಳಿಗೆ ಪ್ರೋತ್ಸಾಹಿಸುವ ಕೆಲಸವು ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕಲಾವಿದರು ಮೇಲಿಂದ ಮೇಲೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಬೇಕು ಎಂದರು. 

ಮುಖ್ಯ ಅತಿಥಿಗಳಾಗಿದ್ದ ಖ್ಯಾತ ವೈದ್ಯರಾದ ಡಾ. ಮೋಹನ್ ಆರ್‌. ಹಂಡೆ, ಡಾ.ಪ್ರವೀಣ ಎಂ.ಖನ್ನೂರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಚೋಳಪ್ಪ ಕಸವಾಳ, ಬನಶಂಕರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಅ.ಕ.ಹಿಂ.ಜಾ. ವೇದಿಕೆಯ ಅಧ್ಯಕ್ಷ ಶಿವಕುಮಾರ ಉಪ್ಪಾರ, ನ್ಯಾಯವಾದಿ ವಾಸುದೇವ ಬಣಕಾರ, ಜಯಪ್ಪ ಜಿಗಳಿ, ಬಿಜೆಪಿ ಮುಖಂಡರಾದ ಪವನ ಮಲ್ಲಾಡದ, ಸಂತೋಷಕುಮಾರ ಪಾಟೀಲ, ಮತ್ತಿತರ ಗಣ್ಣರು ಕಲೆ ಮತ್ತು ಕಲಾ ಪರಂಪರೆ ಹಿಂದಿನ ಮತ್ತು ಇಂದಿನ ಸ್ಥಿತಿಗತಿ ಕುರಿತು ಸಾದ್ಯಾಂತವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ರಂಗಪ್ಪ ಆಡಿನವರ, ದುರ್ಗಾದೇವಿ ದೇವಸ್ಥಾನದ ಅಧ್ಯಕ್ಷ ದುರಗಪ್ಪ ಕರಿಯಜ್ಜಿ, ಕಾರ್ಯದರ್ಶಿ ಬಸವಂತಪ್ಪ ಕೋಟಿಹಾಳ, ಜಯಪ್ಪ ಜಿಗಳಿ, ಉಪಾಧ್ಯಕ್ಷೆ ರೇಖಾ ಮಾದೇನಹಳ್ಳಿ, ಕುಸುಮಾ ಅಶೋಕ ಮಣಕೂರ, ಮಲ್ಲೇಶಪ್ಪ ಕ.ಬಂಗಾರಿ, ಧನಂಜಯ ಕಡೇಮನಿ, ವಿಎಸ್‌ಎಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಹಾಲಪ್ಪ ಮಾಳಗಿ, ರೈತ ಮುಖಂಡ ಮಲ್ಲೇಶಪ್ಪ ಯಳೆಹೊಳಿ ಸೇರಿದಂತೆ ಗ್ರಾಮದ ಅನೇಕ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಲಾವಿದ ರುದ್ರೇಶ್ ಬಡಿಗೇರ ಸಂಗಡಿಗರು ಪ್ರಾರ್ಥಿಸಿದರು. ರಂಗ ಚೇತನ ದ ಅಧ್ಯಕ್ಷ ಗಣೇಶ ಗುಡಗುಡಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ಕೆ.ಎಸ್‌.ನಾಗರಾಜ ನಿರೂಪಿಸಿದರು. ಸಂಘಟಿಕ ಹನುಮಂತಪ್ಪ ಕೋಟಿಹಾಳ ವಂದಿಸಿದರು. 

ನಾಡಿನ ಜನಪದ ಸುಗಮ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮೆರೆದ ವಿಷ್ಣುಮೂರ್ತಿ ಬ.ಬಂಗಾರಿ, ಚಂದ್ರು ಬಳ್ಳಾರಿ, ಕೆ.ಎಸ್‌.ನಾಗರಾಜ, ಗುಡ್ಡರಾಜ ಹಲಗೇರಿ ಮೊದಲಾದವರನ್ನು ಗ್ರಾಮಸ್ಥರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. 3 ತಾಸುಗಳ ಕಾಲ ನಡೆದ ಸಾಂಸ್ಕೃತಿಕ ಕಲಾ ವೈಭವದಲ್ಲಿ ಬಸವರಾಜ ಸಾವಕ್ಕನವರ, ಜಿ.ಯಶೋಧಾ, ಗಣೇಶ ಗುಡಗುಡಿ, ಯಲ್ಲರಡ್ಡಿ ತಿಮ್ಮಣ್ಣನವರ, ಶ್ರೀಧರ ಛಲವಾದಿ, ಕರಬಸಪ್ಪ ಬೇವಿನಹಳ್ಳಿ, ದೇವರಾಜ ಮಾಗೋಡ, ಬಸವರಾಜ ಕಡೇಮನಿ, ಗಾಯಕ ಕೆ.ಎಸ್‌.ನಾಗರಾಜ, ವಿಷ್ಣುಮೂರ್ತಿ ಬಂಗಾರಿ ಮತ್ತು ಗ್ರಾಮದೇವತೆ ಕೋಲಾಟ ತಂಡ, ಶ್ರೀ ದುರ್ಗಾದೇವಿ ಭಜನಾ ಮೇಳ, ಬೀರಲಿಂಗೇಶ್ವರ ಡೊಳ್ಳಿನ ಸಂಘದ ಮೇಳವೂ ಸೇರಿ ಹತ್ತಾರು ಕಲಾ ತಂಡಗಳು ತಮ್ಮ ಕಲೆಗಳನ್ನು ಪ್ರದರ್ಶಿಸಿ ಗ್ರಾಮೀಣ ಸಂಸ್ಕೃತಿಯ ಜನಪದ ಪರಂಪರೆಯ ಅರಿವು ಜಾಗೃತಿ ಮೂಡಿಸುವಲ್ಲಿ ಯಶಸ್ವಿ ಕಂಡವು. 


ಸುದ್ದಿ ಓದಿ