ಚಿಕ್ಕೋಡಿ

ಗ್ರಾಹಕರ ಖಾತೆ ಹ್ಯಾಕ್ ಮಾಡಿ ಹಣ ವಂಚನೆ ಮಾಡುತ್ತಿದ್ದ ಆರೋಪಿಗಳ ಬಂಧನ

ಗ್ರಾಹಕರ ಖಾತೆ ಹ್ಯಾಕ್ ಮಾಡಿ ಹಣ ವಂಚನೆ ಮಾಡುತ್ತಿದ್ದ ಆರೋಪಿಗಳ ಬಂಧನ

ಚಿಕ್ಕೋಡಿ 01: ಬ್ಯಾಂಕಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ಗ್ರಾಹಕರ ಖಾತೆಯನ್ನು ಹ್ಯಾಕ್ ಮಾಡಿ ಹಣ ವಂಚನೆ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್‌.ಪಿ. ಲಕ್ಷ್ಮಣ ನಿಂಬರಗಿ ಹೇಳಿದರು. 

ಇಲ್ಲಿನ ಡಿವೈಎಸ್‌ಪಿ  ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಶ್ರೀ ಅರಿಹಂತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿಯ ಬೋರಗಾಂವ ಈ ಶಾಖೆಯ ಪ್ರಧಾನ ವ್ಯವಸ್ಥಾಪಕರಾಗಿದ್ದ ಅಶೋಕ ಜಿನ್ನು ಬಂಕಾಪೂರೆ ಅವರು ಅರಿಹಂತ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಬೋರಗಾಂವ ಐಸಿಐಸಿಐ ಬ್ಯಾಂಕ್ ಶಾಖೆ ಬೋರಗಾಂವ ಶಾಖೆ ಮತ್ತು ಶಮನೆವಾಡಿ ಆರ್ ಬಿಎಲ್ ಬ್ಯಾಂಕ ಶಾಖೆಯಲ್ಲಿ ತನ್ನ ಉಳಿತಾಯದ ಖಾತೆ ಹೊಂದಿದ್ದರು. ಈ ಎಲ್ಲಾ ಖಾತೆಯಿಂದ ಒಟ್ಟು 94,72,351  ರೂಪಾಯಿ  ಹಣವನ್ನು ಆನಲೈನ್ ಮುಖಾಂತರ ಹ್ಯಾಕ್ ಮಾಡಿ ಮೋಸತನದಿಂದ ಹಣ ದೋಚಿಕೊಂಡಿದ್ದರು. ಈ ಬಗ್ಗೆ ಸದಲಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹ್ಯಾಕ್ ಮಾಡಿದವರ ಮಾಹಿತಿ ಕಲೆ ಹಾಕಲು ಮುಂದಾಗಿರುವ  ಸಂದರ್ಭದಲ್ಲಿ  ಪೋಲಿಸರಿಗೆ ಮೋಸತನ ಮಾಡಿರುವ ಬಗ್ಗೆ ಖಚಿತವಾಯಿತು. ಆನಲೈನ್ ಮೂಲಕ ಹಣ ವಂಚನೆ ಮಾಡಿದ ಆರೋಪಿತರ ತಂಡ ಪತ್ತೆಗಾಗಿ ವಿಶೇಷ ಪೋಲಿಸರ್ ತಂಡ ರಚನೆ ಮಾಡಲಾಗಿತ್ತು. ವಂಚನೆ ಮಾಡಿರುವ ಆರೋಪಿಗಳು ಮುಂಬೈನಲ್ಲಿ  ಇರುವ ಬಗ್ಗೆ ಖಚಿತವಾಯಿತು. ಪಕ್ಕದ ಮಹಾರಾಷ್ಟ್ರ  ರಾಜ್ಯದ ಮುಂಬೈ ರಾಜ್ಯದ    ಪೂರ್ವ ನಾಲಾ ಸೋಪುರದಲ್ಲಿ    ಬಟ್ಟೆ ವ್ಯಾಪಾರ ಮಾಡುತ್ತಿದ್ದ ನೈಜೇರಿಯಾ ದೇಶದ ಉಜಕಾ ಪೀಟರ ಚಿಗೋಜಿ(40) ಹಾಗೂ ಕಾಲಸೆಂಟರನಲ್ಲಿ ಕಾರ್ಯ ಮಾಡುತ್ತಿದ್ದ ಮಹಾರಾಷ್ಟ್ರದ ಮುಂಬೈನ ಪೂರ್ವದ ಪಾಲಗರ ಜಿಲ್ಲೆಯ ವಸಾಯಿ ತಾಲೂಕಿನ ನಾಯಗಾಂವ ಗ್ರಾಮದ ಇಂದ್ರೇಶ ಹರಿಶಂಕರ ಪಾಂಡೆ (28) ಎಂಬಾತನನ್ನು ಸದಲಗಾ ಪೋಲಿಸರು ಬಂಧಿಸಿದ್ದಾರೆ. ಚಿಕ್ಕೋಡಿ 1 ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 7 ದಿವಸಗಳವರೆಗೆ ನ್ಯಾಯಾಲಯವು  ಪೋಲಿಸ್ ಕಸ್ಟಡಿಗೆ ನೀಡಿದೆ. ಇನ್ನೋರ್ವ ಆರೋಪಿ ಮುಂಬೈ ಮೂಲದ  ಎಆರ್‌ಸಿಎಚ್ ಆರ್ ಸರ್ವಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭೀಜಿತ ಘನಶ್ಯಾಮ ಮಿಶ್ರಾ (27) ಇತನು ಪರಾರಿಯಾಗಿದ್ದಾನೆ. ಇತನಿಗಾಗಿ ಶೋಧ ಕಾರ್ಯ ಮಾಡಲಾಗುತ್ತಿದೆ. ಇನ್ನು ಈ ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಆಫ್ರಿಕಾ ದೇಶದ ಟೊನಿ ಎಂಬಾತ ಭಾಗಿಯಾಗಿರುವದಾಗಿ ತಿಳಿದು ಬಂದಿದೆ. ಇನ್ನು ಇತನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ ಎಂದರು. ಬಂಧಿತರಿಂದ 3 ಮೊಬಾಯಿಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದರು. ಸದರಿ ತಂಡದಲ್ಲಿ ಡಿವೈಎಸ್ಪಿ ಮನೋಜಕುಮಾರ ನಾಯಿಕ, ಸಿಪಿಐ ಆರ್‌.ಆರ್‌.ಪಾಟೀಲ, ಪಿಎಸ್‌ಐಗಳಾದ ಆರ್‌.ವೈ.ಬೀಳಗಿ, ಭರತ ಎಸ್, ರಾಕೇಶ ಬಗಲಿ, ಸಿಬ್ಬಂದಿಗಳಾದ ಎಸ್‌.ಎ.ಗೊಡಸೆ, ಎಸ್‌.ಎಚ್‌.ದೇವರ, ಎಸ್‌.ಪಿ.ಗಲಗಲಿ, ಎಸ್‌.ಎಲ್‌.ಬಾಡಕರ್, ಎಂ.ಆರ್‌.ಗಡ್ಡೆ, ಗಜು ಕಾಂಬಳೆ ಇವರು ಕಾರ್ಯಚರಣೆೆಯಲ್ಲಿ ಭಾಗವಹಿಸಿದ್ದರು. ಇವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅನಾಮಿಕರು  ದೂರವಾಣಿ ಮೂಲಕ ಕರೆ ಮಾಡಿದರೆ ಸಾರ್ವಜನಿಕರು ತಮ್ಮ ಬ್ಯಾಂಕ ಖಾತೆ ನಂಬರ ಹಾಗೂ ಎಟಿಎಂ ಪಿನ್ ಕೋಡ ವಿವರ ನೀಡಬಾರದು ಎಂದು ಜನರಲ್ಲಿ ಮನವಿ ಮಾಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಡಿವೈಎಸ್ಪಿ ಮನೋಜ ನಾಯಿಕ,ಸಿಪಿಐ ಆರ್‌.ಆರ್‌.ಪಾಟೀಲ, ಪಿಎಸ್‌ಗಳಾದ ರಾಕೇಶ ಬಗಲಿ, ಅಶೋಕ ಕುಳ್ಳೂರ, ಆರ್‌.ವೈ.ಬೀಳಗಿ ಉಪಸ್ಥಿತರಿದ್ದರು. 


ಸುದ್ದಿ ಓದಿ