ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಪಕ್ಷಗಳ ಸಭೆ ನಡೆಸಿದ ಚುನಾವಣಾಧಿಕಾರಿಗಳು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಏ.20 ಕೊನೆದಿನ : ಕಾವ್ಯರಾಣಿ
ಲೋಕದರ್ಶನ ವರದಿ
ಯಲಬುರ್ಗಾ 11: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ 2023 ರ 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ರಾಜಕೀಯ ಪಕ್ಷದ ಮುಖಂಡರು ನಾಮಪತ್ರ ಸಲ್ಲಿಸಲು ಏ.20 ಕೊನೆಯ ದಿನವಾಗಿದೆ ಎಂದು ಮಾನ್ಯ ಚುನಾವಣಾಧಿಕಾರಿಗಳಾದ ಕಾವ್ಯರಾಣಿ ಕೆ.ವಿ ಅವರು ತಿಳಿಸಿದರು.
ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಕಂದಾಯ ಭವನ ಚುನಾವಣಾಧಿಕಾರಿಗಳ ಕಾರ್ಯಾಲಯದಲ್ಲಿ ಭಾರತ ಚುನಾವಣಾ ಆಯೋಗದ ವತಿಯಿಂದ ಸೋಮುವಾರ ಹಮ್ಮಿಕೊಂಡಿದ್ದ 63 ಯಲಬುರ್ಗಾ ವಿಧಾನಸಭಾ ಕ್ಷೇತ್ರದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ವೇಳಾಪಟ್ಟಿ ಹೊರಡಿಸಿದ್ದು, ಏ.13 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 20 ಕೊನೆಯ ದಿನಾಂಕವಾಗಿದೆ. ಏಪ್ರಿಲ್ 21ರಂದು ನಾಮಪತ್ರಗಳ ಪರೀಶೀಲನೆ ನಡೆಯಲಿದೆ.
ಏಪ್ರಿಲ್ 24ರಂದು ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ 10ರಂದು ಮತದಾನ, ಮೇ.13ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.ಅಭ್ಯರ್ಥಿಗಳು ನಾಮಪತ್ರವನ್ನು ಯಲಬುರ್ಗಾ ತಹಶೀಲ್ದಾರ್ ಕಛೇರಿ ಆವರಣದಲ್ಲಿರುವ ಕಂದಾಯ ಸಭಾಭವನದ ಒಂದನೆ ಮಹಡಿಯಲ್ಲಿರುವ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಯಿಂದ 3 ಗಂಟೆ ವೇಳೆಯಲ್ಲಿ ಪಡೆದುಕೊಂಡು ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಯಾವುದೇ ದಿನದಂದು ಬೆಳಗ್ಗೆ 11 ರಿಂದ ಮದ್ಯಾಹ್ನ 3 ಗಂಟೆಯ ನಡುವೆ ಏ.20 ಮೀರದಂತೆ (ಸರ್ಕಾರಿ ರಜಾ ದಿನ ಹೊರತು) ಸಲ್ಲಿಸಬಹುದು. ನಂತರ ಬರುವ ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಸ್ತುತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಎಲ್ಲರೂ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಹೇಳಿದರು.ನಾಮಪತ್ರ ಸಲ್ಲಿಸುವವರಿಗೆ ವಿಶೇಷ ಸೂಚನೆಗಳು:ನಾಮಪತ್ರ ನಮೂನೆ-2ಬಿನಲ್ಲಿ ಸಲ್ಲಿಸಬೇಕು. ಹೆಸರು ಮತ್ತು ಅಂಚೆ ವಿಳಾಸ ಸ್ಪಷ್ಟವಾಗಿರಬೇಕು. ನಮೂನೆ 26ರಲ್ಲಿ ಅಫಿಡವಿಟ್ ರೂ.20 ರ ಛಾಪಾ ಕಾಗದದಲ್ಲಿ ಸಲ್ಲಿಸಬೇಕು. ಅಭ್ಯರ್ಥಿಯು ಎಲ್ಲ ಪುಟಗಳಲ್ಲಿ ಸಹಿ ಮಾಡಿರಬೇಕು. ಎಲ್ಲ ಕಾಲಂಗಳನ್ನು ಕಡ್ಡಾಯವಾಗಿ ಭರ್ತಿ ಮಾಡಿರಬೇಕು. ಅನ್ವಯವಾಗ ಕಾಲಂನಲ್ಲಿ ಓಋ/ಇಲ್ಲ ಎಂದು ಬರೆಯಬೇಕು. ನೋಟರಿ ಪಬ್ಲಿಕ್ ರಿಂದ ದೃಢಿಕರಿಸಿರಬೇಕು. ಅಫಿಡವಿಟ್ ನ ಕ್ರಮಸಂಖ್ಯೆ 3 ರಲ್ಲಿ ಅಭ್ಯರ್ಥಿಯ ಸಾಮಾಜಿಕ ಜಾಲತಾಣದ ವಿವರ ನೀಡಬೇಕು. ಅಫಿಡವಿಟ್ ಸಲ್ಲಿಸದಿದ್ದರೆ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಕಾಲಂ 36 ರಂತೆ ಅನರ್ಹತೆ ಮಾನದಂಡವಾಗಿದೆ ಎಂದರು.ಈ ಸಭೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಜರಿದ್ದರು.