ಧಾರವಾಡ - ಹುಬ್ಬಳ್ಳಿ

ಶೂ ಮತ್ತು ಸಾಕ್ಸ್‌ ವಿತರಣೆಯಲ್ಲಿ ಸರಕಾರಿ ನಿಯಮ, ಪಾರದರ್ಶಕತೆ ಪಾಲನೆ ಕಡ್ಡಾಯ

ಶೂ ಮತ್ತು ಸಾಕ್ಸ್‌ ವಿತರಣೆಯಲ್ಲಿ ಸರಕಾರಿ ನಿಯಮ, ಪಾರದರ್ಶಕತೆ ಪಾಲನೆ ಕಡ್ಡಾಯ

ಸಾರ್ವಜನಿಕವಾಗಿ ದೂರು ಬಂದಲ್ಲಿ ಸೂಕ್ತ ಕ್ರಮ; ಜಿಲ್ಲಾಧಿಕಾರಿ ದಿವ್ಯ ಪ್ರಭು 

ಧಾರವಾಡ ಜು.09: ಸರಕಾರಿ ಶಾಲೆಗಳಲ್ಲಿ 1 ರಿಂದ 10 ನೇ ತರಗತಿವರೆಗೆ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2025-26 ನೇ ಸಾಲಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ವಿತರಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶಿಸಿದ್ದು, ಜೂ.21 ರ ಸರಕಾರಿ ಆದೇಶದಲ್ಲಿ  ತಿಳಿಸಿರುವ ಷರತ್ತು ಮತ್ತು ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಿ, ಪಾರದರ್ಶಕವಾಗಿ ಖರೀದಿಸಬೇಕು. ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ಸರಿಯಾದ ಮಾಹಿತಿ, ಸಮನ್ವಯ ಮಾಡಿ, ಸರಕಾರಿ ನಿಯಮ ಪಾಲನೆಯಲ್ಲಿ ಲೋಪವಾಗದಂತೆ ಇಲಾಖೆ ಅಧಿಕಾರಿಗಳು ಮುನ್ನಚ್ಚರಿಕೆವಹಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. 

ಅವರು ನಿನ್ನೆ (ಜು.08) ಸಂಜೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿವಿಧ ಹಂತದ ಅಧಿಕಾರಿಗಳ ಸಭೆ ಜರುಗಿಸಿ, ಮಾತನಾಡಿದರು. 

ಸರಕಾರದ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸರಿಯಾಗಿ ತಲುಪಬೇಕು. ಸರಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ನೀಡುವ ಸಮವಸ್ತ್ರ, ಪಠ್ಯಪುಸ್ತಕ ಮತ್ತು ಶೂ, ಸಾಕ್ಸ್‌ ಗುಣಮಟ್ಟದ್ದಾಗಿರಬೇಕು. ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ಖರೀದಿಗೆ ಅನುದಾನವನ್ನು ಎಸ್‌.ಡಿ.ಎಂ.ಸಿ ಖಾತೆಗೆ ನೇರವಾಗಿ ಜಮೆ ಆಗುತ್ತದೆ. ಇವುಗಳ ಖರೀದಿಗೆ ಅನುಸರಿಸುವ ಮಾರ್ಗಸೂಚಿ ಹಾಗೂ ಷರತ್ತು, ನಿಬಂಧನೆಗಳನ್ನು ಈಗಾಗಲೇ ಎಲ್ಲ ಶಾಲೆಗಳ ಮುಖ್ಯಸ್ಥರಿಗೆ ಕಳುಹಿಸಲಾಗಿದೆ. ಸಮಿತಿ ಸದಸ್ಯರಿಗೆ ಸುತ್ತೋಲೆ ಮಾಹಿತಿ, ಸೂಕ್ತ ತಿಳುವಳಿಕೆ ನೀಡಿ, ಪಾರದರ್ಶಕತೆ ಅನುಸರಿಸಬೇಕು ಎಂದು ಅವರು ಹೇಳಿದರು.  

ಶೂ, ಸಾಕ್ಸ್‌ಗಳ ಗುಣಮಟ್ಟ ಮತ್ತು ಇಲಾಖೆ ಸೂಚಿಸಿರುವ ಸ್ಪೇಷಿಪಿಕೇಶನ್ ಇರಬೇಕು. ಶೂ, ಸಾಕ್ಸ್‌ಗಳ ಗುಣಮಟ್ಟ ಇಲ್ಲ, ಕಳಪೆ ಆಗಿವೆ ಇತ್ಯಾದಿ ಸಾರ್ವಜನಿಕರಿಂದ, ವಿದ್ಯಾರ್ಥಿಗಳಿಂದ ದೂರುಗಳು ಬಂದಲ್ಲಿ ಪರೀಶೀಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಂಡು, ಸಂಬಂಧಿಸಿದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು. 

ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದ ವರದಿ ಸಲ್ಲಿಸಿ: ಈಗಾಲೇ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಿದ ಬಗ್ಗೆ ಎಲ್ಲ ಬಿಇಓ ಅವರು ಕೂಡಲೆ ವರದಿ ಸಲ್ಲಿಸಬೇಕು. ಕೆಲವು ಶಾಲೆಗಳಲ್ಲಿ ಸರಿಯಾಗಿ ಸಮವಸ್ತ್ರ ವಿತರಿಸದರ ಬಗ್ಗೆ ದೂರುಗಳಿವೆ. ಈ ಶನಿವಾರದೊಳಗೆ ಎಲ್ಲ ವಿದ್ಯಾರ್ಥಗಳಿಗೂ ಎರಡು ಜೊತೆ ಸಮವಸ್ತ್ರದ ಬಟ್ಟೆ, ಪಠ್ಯಪುಸ್ತಕ ವಿತರಿಸಿ, ಅದರ ಬಗ್ಗೆ ವರದಿ ಸಲ್ಲಿಸಲು ಅವರು ಸೂಚಿಸಿದರು. 

ಶಾಲಾ ಹಾಜರಾತಿ ಹೆಚ್ಚಿಸಲು ಸಮುದಾಯಗಳೊಂದಿಗೆ ಸಭೆ; ಪ್ರಸಕ್ತ ಸಾಲಿನ ಜೂನ ತಿಂಗಳ ಅಂತ್ಯದವರೆಗೆ  ಜಿಲ್ಲೆಯಲ್ಲಿ 1 ರಿಂದ 10 ನೇ ತರಗತಿವರೆಗೆ ಒಟ್ಟು 3,39,109 ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. ಇದರಲ್ಲಿ 33,588. ಸಾಮಾನ್ಯ, 35,861 ಪರಿಶಿಷ್ಟ ಜಾತಿ, 17,977 ಪರಿಶಿಷ್ಟ ಪಂಗಡ, 2,51,583 ಹಿಂದುಳಿದ ವರ್ಗ ಹಾಗೂ 89,963 ಅಲ್ಪಸಂಖ್ಯಾತ ವಿದ್ಯಾರ್ಥಿಗಳು ನೋಂದಣಿ ಆಗಿದ್ದಾರೆ. 

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಅಲ್ಪಸಂಖ್ಯಾತ ಸಮುದಾಯಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ಸಹಯೋಗದಲ್ಲಿ ಸಭೆ ಜರುಗಿಸಿ, ಮಕ್ಕಳ ಶಾಲಾ ಹಾಜರಾತಿ ಹೆಚ್ಚಳಕ್ಕೆ ಮತ್ತು ಪರಿಣಾಮಕಾರಿಯಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಮುದಾಯಗಳ ಸಹಕಾರ ಕೋರುತ್ತೇವೆ. ಈ ಕುರಿತು ಚರ್ಚಿಸಲು ವಿವಿಧ ಸಮುದಾಯಗಳೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಪ್ರತ್ಯೇಕ ಸಭೆ ಅಯೋಜಿಸಲಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು. 

ಇಲಾಖೆ ಸುತ್ತೋಲೆ, ಆದೇಶಗಳ ಪಾಲನೆಗೆ ಅನುಪಾಲನಾ ವರದಿ ನೀಡಿ: ಶೈಕ್ಷಣಿಕ ಸುಧಾರಣೆಗಾಗಿ ಇಲಾಖೆಯಿಂದ ಅನೇಕ ಹಂತದಲ್ಲಿ ಪರಿಣಾಮಕಾರಿ ಕ್ರಮಗಳನ್ನು ಶಿಕ್ಷಣ ಇಲಾಖೆಯಿಂದ ಕೈಗೊಳ್ಳಲಾಗುತ್ತಿದೆ. ಪ್ರಧಾನ ಕಾರ್ಯದರ್ಶಿಗಳು ಶಿಕ್ಷಕರ ಹಾಜರಾತಿ, ಮಕ್ಕಳ ಹಾಜರಾತಿ, ಶಾಲಾ ಅವಧಿಯಲ್ಲಿ ಶಿಕ್ಷಕರು ಹೊರಹೋಗದಂತೆ ನಿರ್ಭಂದಿಸಿ, ಆದೇಶ, ಸುತ್ತೋಲೆಗಳನ್ನು ಹೊರಡಿಸಿದ್ದಾರೆ. ಕಟ್ಟುನಿಟ್ಟಾಗಿ ಇವುಗಳ ಪಾಲನೆ ಆಗಬೇಕು. ಬಿಇಓ, ಡಿಡಿಪಿಐ ಅವರು ಶಾಲೆಗಳಿಗೆ ಅನೀರೀಕ್ಷಿತ ಭೇಟಿ ನೀಡಿ ಪರೀಶೀಲಿಸಿ, ಖಚಿತ ಪಡಿಸಿಕೊಳ್ಳಬೇಕೆಂದು ಮತ್ತು ಡಿಡಿಪಿಐ ಅವರು ಈ ಕುರಿತು ಜಿಲ್ಲಾಡಳಿತಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕೆಂದು ಅವರು ನಿರ್ದೇಶಿಸಿದರು. 

ಹೈಸ್ಕೂಲ್ ಶಿಕ್ಷಕರ ಬಿಎಲ್‌ಓ ಕರ್ತವ್ಯ ವಿನಾಯಿತಿ: ಮಿಷನ್ ವಿದ್ಯಾಕಾಶಿ ಯೋಜನೆಯ ಪರಿಣಾಮಕಾರಿ ಅನುಷ್ಠಾನ ಮತ್ತು ಜಿಲ್ಲೆಯ ಶೈಕ್ಷಣಿಕ ಸುಧಾರಣೆಗಾಗಿ ಜಿಲ್ಲಾಡಳಿತ ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಶಾಲಾ ಅವಧಿಯಲ್ಲಿ ಶಾಲೆಯಲ್ಲಿ ಇದ್ದು, ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಆಸಕ್ತಿ, ಕಾಳಜಿವಹಿಸುವುದು ಅತೀ ಜರೂರ ಇದೆ. ಆದ್ದರಿಂದ  ಜಿಲ್ಲೆಯ ವಿವಿಧ ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಪ್ರೌಢಾಲಾ ಶಿಕ್ಷಕರನ್ನು ಬಿಎಲ್‌ಓ ಆಗಿ ನಿಯೋಜಿಸಲಾಗುತ್ತಿದ್ದನ್ನು ನಿಲ್ಲಿಸಲಾಗಿದೆ. ಈಗಾಗಲೇ ಆದೇಶವಾಗಿದ್ದರೆ ಅದನ್ನು ರದ್ದುಪಡಿಸಿ, ಅವರಿಗೆ ಶಾಲೆಯಲ್ಲಿ ಹೆಚ್ಚುವರಿ ಪಾಠ ಮಾಡಲು ಅನುಕೂಲ ಮಾಡಲಾಗುತ್ತದೆ. ಶಿಕ್ಷಕರಿಗೆ ಹೆಚ್ಚುವರಿ ಕೆಲಸ ಜವಾಬ್ದಾರಿಯನ್ನು ಹಂತಹಂತವಾಗಿ ಕಡಿಮೆ ಮಾಡಲಾಗುತ್ತಿದೆ. ಶಿಕ್ಷಕರು ಪ್ರಾಮಾಣಿಕತೆ ಮತ್ತು ಹೆಚ್ಚು ಕಾಳಜಿಯಿಂದ ತಮ್ಮನ್ನು ತಾವು ಶೈಕ್ಷಣಿಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. 

ಪ್ರತಿ ಶಾಲೆಗೆ ಬೈಯೋಮೆಟ್ರಿಕ್, ಫೇಸ್ ರೆಕಗ್ನೈಜೆಷನ್ ಮಷಿನ್ ಅಳವಡಿಕೆ: ಪ್ರತಿ ಶಾಲೆಗಳಲ್ಲಿ ನಿಯಮಿತ ಸಮಯಕ್ಕೆ ಶಿಕ್ಷಕರು ಹಾಜರಿದ್ದು, ಶಾಲಾ ಅವಧಿ ನಂತರ ತೆರಳುವದನ್ನು ಖಾತರಿ ಮಾಡಿಕೊಳ್ಳಲು ಬಯೋಮೆಟ್ರಕ್ ಮತ್ತು ಫೇಸ್ ರೆಕಗ್ನೈಜೆಷನ್ (ಈಚಿಛಿಜ ಖಜಛಿಠಟಿಣಠ) ಇರುವ ಮಷಿನ್ ಅಳವಡಿಸಲು ಚಿಂತಿಸಲಾಗುತ್ತಿದೆ. ಮಷಿನ್ ಅಳವಡಿಕೆ ನಂತರ ಎಲ್ಲ ಶಿಕ್ಷಕರು, ಸಿಬ್ಬಂದಿಗಳು ನಿಗಧಿತ ಸಮಯಕ್ಕೆ ಹಾಜರಿದ್ದು ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಮೂರು ಅವಧಿಯಲ್ಲಿ ಹಾಜರಾತಿ ದಾಖಲಿಸಿ, ಅದನ್ನು ಹೆಚ್‌.ಆರ್‌.ಎಮ್‌.ಎಸ್‌. ದೊಂದಿಗೆ ಲಿಂಕ್ ಮಾಡಿ, ಹಾಜರಾತಿ ತಕ್ಕಂತೆ ವೇತನ ಆವತಿ ಆಗುವ ಸೌಲಭ್ಯ ಮಾಡಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಿ, ಪಾಲಿಸಬೇಕು ಎಂದರು. 

ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಮಾತನಾಡಿ, ಶೈಕ್ಷಣಿಕ ಸುಧಾರಣೆಗೆ ಸಮುದಾಯದ ಪಾಲ್ಗೊಳ್ಳುವಿಕೆ ಮುಖ್ಯವಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿನಲ್ಲಿ ಎಲ್ಲ ಶಾಲೆಗಳ ಎಸ್‌.ಡಿ.ಎಂ.ಸಿ ಅಧ್ಯಕ್ಷರ, ಸದಸ್ಯರ, ಪಾಲಕರ ಸಮಿತಿ ಅಧ್ಯಕ್ಷರ ಹಾಗೂ ಇಲಾಖೆ ಅಧಿಕಾರಿಗಳ ಸಭೆ ಆಯೋಜಿಸಲಾಗುವುದು. ಬಿಇಓ, ಡಿಡಿಪಿಐ ಅವರು ಕಚೇರಿಯಲ್ಲಿ ಕಾಲ ಕಳೆಯದೆ ಶಾಲಾಗಳಿಗೆ ನಿರಂತರವಾಗಿ ಭೇಟಿ ನೀಡಿ, ಪರೀಶೀಲಿಸಬೇಕು. ಶಿಕ್ಷಕರ, ವಿದ್ಯಾರ್ಥಿಗಳ ಬಗ್ಗೆ ಗಮನಹರಿಸಬೇಕು ಎಂದು ಹೇಳಿದರು. 

ಸಮುದಾಯದ ಸಭೆಗಳಲ್ಲಿ ಸರಕಾರದ ವಿವಿಧ ಯೋಜನಗಳ ಕುರಿತು ಇಲಾಖೆ ಅಧಿಕಾರಿಗಳು ಜಾಗೃತಿ, ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಅವರು ಹೇಳಿದರು.  

ಸಭೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಎಸ್‌.ಕೆಳದಿಮಠ ಸೇರಿದಂತೆ ಡಿಡಿಪಿಐ ಕಚೇರಿಯ ವಿವಿಧ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌.ಪಿ ಗಳು, ಸಿಆರ್‌.ಪಿ ಗಳು, ಶಿಕ್ಷಣ ನೀರೀಕ್ಷಕರು ಹಾಗೂ ಶಾಲಾ ಶಿಕ್ಷಣ ಇಲಾಖೆ ಇತರರು ಇದ್ದರು. 

ಸುದ್ದಿ ಓದಿ