ಸರ್ಕಾರಿ ನೌಕರರ ಸೇವಾ ಪ್ರಶಸ್ತಿಗೆ ಅ.15ರೊಳಗೆ ಅರ್ಜಿ
ಲೋಕದರ್ಶನ ವರದಿ
ಹೊಸಪೇಟೆ 02: ಸರ್ಕಾರಿ ಸೇವೆಯಲ್ಲಿ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ, ದಕ್ಷತೆ ಹಾಗೂ ಜನಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿರುವ ಅತ್ಯುತ್ತಮ ಸರ್ಕಾರಿ ನೌಕರರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ‘ಸರ್ಕಾರಿ ನೌಕರರ ಸೇವಾ ಪ್ರಶಸ್ತಿ’ ನೀಡಲು ಅರ್ಹರಿಂದ ನಾಮನಿರ್ದೇಶನ ಆಹ್ವಾನಿಸಲಾಗಿದೆ.
ರಾಜ್ಯ ಸರ್ಕಾರದ ಗ್ರೂಪ್ ‘ಎ’, ‘ಬಿ’, ‘ಸಿ’ ಮತ್ತು ‘ಡಿ’ ವೃಂದದ ಖಾಯಂ ನೌಕರರು ಪ್ರಶಸ್ತಿಗೆ ಅರ್ಹರಾಗಿದ್ದು, ಸರ್ಕಾರಿ ಸೇವೆಗೆ ಸೇರಿದ ಬಳಿಕ ಕನಿಷ್ಠ ಐದು ವರ್ಷಗಳ ಸೇವೆ ಪೂರ್ಣಗೊಳಿಸಿರಬೇಕು. ಸಂಘಕ್ಕೆ ವಾರ್ಷಿಕ 200 ಸದಸ್ಯತ್ವ ಶುಲ್ಕ ಪಾವತಿಸಿರುವ ಜಿಲ್ಲೆ ಹಾಗೂ ತಾಲೂಕುಗಳಲ್ಲಿನ ಅಧಿಕಾರಿ-ನೌಕರರು ಅರ್ಹರಾಗಿರುತ್ತಾರೆ. ಕರ್ತವ್ಯನಿಷ್ಠೆ, ಗುಣಮಟ್ಟದ ಸೇವೆ, ಸಾರ್ವಜನಿಕರಿಗೆ ಸ್ಪಂದನೆ, ಗಮನಾರ್ಹ ಸಾಧನೆ, ಸಾರ್ವಜನಿಕ ಹಿತಕ್ಕಾಗಿ ಕೈಗೊಂಡ ವಿಶೇಷ ಕಾರ್ಯಗಳು, ಕಚೇರಿ ಕಾರ್ಯಕ್ಷಮತೆ, ಸಮಯಪಾಲನೆ, ಹೊಸ ಆಲೋಚನೆಗಳು ಹಾಗೂ ಸರಳೀಕರಣದ ಪ್ರಯತ್ನಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ದುರ್ಬಲ ವರ್ಗಗಳ ಬಗ್ಗೆ ಮಾನವೀಯ ಕಾಳಜಿ, ಸಹೋದ್ಯೋಗಿಗಳೊಂದಿಗೆ ಸಮನ್ವಯ ಮತ್ತು ಇಲಾಖೆಯ ಹಾಗೂ ಸರ್ಕಾರದ ಸೇವಾ ಗೌರವ ಹೆಚ್ಚಿಸುವ ಕೊಡುಗೆಗಳಿಗೂ ಆದ್ಯತೆ ನೀಡಲಾಗುತ್ತದೆ.
ಅರ್ಹ ನೌಕರರು ಸ್ವತಃ ಅರ್ಜಿ ಸಲ್ಲಿಸುವಂತಿಲ್ಲ. ಇಲಾಖಾ ಮುಖ್ಯಸ್ಥರು, ಮೇಲಾಧಿಕಾರಿಗಳು, ಸಹೋದ್ಯೋಗಿಗಳು, ಸಂಘ-ಸಂಸ್ಥೆಗಳು, ಸಾರ್ವಜನಿಕರು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಅರ್ಹರನ್ನು ನಾಮನಿರ್ದೇಶನ ಮಾಡಬಹುದು. ನಾಮನಿರ್ದೇಶನವನ್ನು ಮೂಲಕ ಆನ್ಲೈನ್ನಲ್ಲಿ ಮಾತ್ರ ಸಲ್ಲಿಸಬೇಕು. ಸರ್ಕಾರಿ ಇಲಾಖೆಯಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಮತ್ತು ಸಾಧನೆಗಳ ವಿವರಗಳೊಂದಿಗೆ ಅಗತ್ಯ ದಾಖಲೆಗಳು ಹಾಗೂ ಇತ್ತೀಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಬೇಕು. ಅಪೂರ್ಣ ನಾಮನಿರ್ದೇಶನಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಅಕ್ಟೋಬರ್ 15, 2026. ಹೆಚ್ಚಿನ ಮಾಹಿತಿಗಾಗಿ ಟಿ. ಪಂಪಣ್ಣ (ಜಿಲ್ಲಾ ಕಾರ್ಯದರ್ಶಿ), ಮಲ್ಲೇಶಪ್ಪ ಕೆ. (ಜಿಲ್ಲಾ ಖಜಾಂಚಿ) ಹಾಗೂ ರಾಘವೇಂದ್ರ ಎಸ್. ಹೆಗಡಿಯಾರ್ (ರಾಜ್ಯ ಪರಿಷತ್ ಸದಸ್ಯ) ಅವರನ್ನು ಸಂಪರ್ಕಿಸಬಹುದು.