ಬೆಳಗಾವಿ

ಮಾಜಿ ಸೈನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ರಾಜ್ಯಪಾಲರಿಗೆ ಮನವಿ

ಮಾಜಿ ಸೈನಿಕರ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ರಾಜ್ಯಪಾಲರಿಗೆ ಮನವಿ

ಬೆಳಗಾವಿ: ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಜಿಲ್ಲಾಧ್ಯಕ್ಷ ಜಗದೀಶ್ ಪೂಜೇರಿ ಹಾಗೂ ಪದಾಧಿಕಾರಿಗಳ ತಂಡವು ಗುರುವಾರ ಲೋಕಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ, ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡುವುದರೊಂದಿಗೆ ಮಾಜಿ ಸೈನಿಕರು ಹಾಗೂ ವೀರನಾರಿಯರ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆಯಿತು.  

ಜುಲೈ 26ರಂದು ಮಹಾಕೂಟದ ವತಿಯಿಂದ ಆಯೋಜಿಸಲಾಗಿರುವ 27ನೇ ಕಾರ್ಗಿಲ್ ವಿಜಯೋತ್ಸವ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ರಾಜ್ಯಪಾಲರಿಗೆ ಆಹ್ವಾನಿಸಲಾಯಿತು.  ಮಾಜಿ ಸೈನಿಕರು ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯಗಳ ಕುರಿತು ರಾಜ್ಯಪಾಲರಿಗೆ ವಿವರಿಸಲಾಯಿತು. ಮುಖ್ಯವಾಗಿ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ‘ಡಿ’ ಗ್ರೂಪ್ ಹುದ್ದೆಗಳಲ್ಲಿ ಮಾಜಿ ಸೈನಿಕರಿಗೆ ಮೀಸಲಿರುವ ಶೇ.10ರಷ್ಟು ಮೀಸಲಾತಿಯನ್ನು ಸಮರ​‍್ಕವಾಗಿ ಜಾರಿಗೊಳಿಸಬೇಕು ಎಂದು ಮನವಿ ಮಾಡಲಾಯಿತು.  

ಈ ಮೀಸಲಾತಿ ಸಿಗದೆ 40ರಿಂದ 60 ವರ್ಷದ ಅನೇಕ ಮಾಜಿ ಸೈನಿಕರು ಉದ್ಯೋಗವಿಲ್ಲದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಮೀಸಲಾತಿ ಸರಿಯಾಗಿ ಜಾರಿಯಾದರೆ ನಿವೃತ್ತಿಯ ನಂತರ ಮಾಜಿ ಸೈನಿಕರಿಗೆ ಪುನರ್ವಸತಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.  ಮಾಜಿ ಸೈನಿಕರು ಹಾಗೂ ವೀರನಾರಿಯರಿಗೆ ನಿವೇಶನ ಸೌಲಭ್ಯ ಒದಗಿಸುವ ಬೇಡಿಕೆಯೂ ಹಲವು ವರ್ಷಗಳಿಂದ ಬಾಕಿಯಿದೆ. ಈ ಕುರಿತು ಸರ್ಕಾರಗಳು ಭರವಸೆ ನೀಡುತ್ತಿದ್ದರೂ ಇದುವರೆಗೆ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಂಘಟನೆ ತಿಳಿಸಿತು.  

ಯುದ್ಧ ಹಾಗೂ ಯುದ್ಧದಂತಹ ಪರಿಸ್ಥಿತಿಗಳಲ್ಲಿ ದೇಶದ ರಕ್ಷಣೆಗೆ ಪ್ರಾಣತ್ಯಾಗ ಮಾಡಿದ ಯೋಧರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡುವ ಬೇಡಿಕೆಯೂ ಹಲವು ವರ್ಷಗಳಿಂದ ಬಾಕಿಯಿದೆ. ಕಾರ್ಗಿಲ್ ಯುದ್ಧ ಮುಗಿದು 27 ವರ್ಷಗಳಾದರೂ ಹುತಾತ್ಮ ಯೋಧರ ಕುಟುಂಬಗಳ ಕೆಲವು ಸದಸ್ಯರು ಇನ್ನೂ ಉದ್ಯೋಗಕ್ಕಾಗಿ ಕಾಯುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಯಿತು.  

ಯುದ್ಧದಲ್ಲಿ ಹುತಾತ್ಮರಾದ ಕಿರಿಯ ವಯಸ್ಸಿನ ಸೈನಿಕರ ಪತ್ನಿಯರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಸರ್ಕಾರಿ ಉದ್ಯೋಗದಲ್ಲಿ ಆದ್ಯತೆ ನೀಡಬೇಕು ಎಂದು ಒತ್ತಾಯಿಸಲಾಯಿತು.  ಇದಲ್ಲದೆ, ದೇಶಕ್ಕಾಗಿ 17ರಿಂದ 30 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಿಗೆ ಟೋಲ್ ಪ್ಲಾಜಾಗಳಲ್ಲಿ ರಿಯಾಯಿತಿ ನೀಡಬೇಕು. ಪ್ರಸ್ತುತ ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ರಾಜಕಾರಣಿಗಳಿಗೆ ಇರುವ ಕೆಲವು ಸೌಲಭ್ಯಗಳು ಮಾಜಿ ಸೈನಿಕರಿಗೆ ದೊರೆಯುತ್ತಿಲ್ಲ ಎಂಬ ಅಸಮಾಧಾನವನ್ನು ವ್ಯಕ್ತಪಡಿಸಲಾಯಿತು.  


ಸುದ್ದಿ ಓದಿ