ಕೃಷ್ಣಾ ನದಿ ಪ್ರವಾಹ ಪೀಡಿತ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಮನವಿ
ಚಿಕ್ಕೋಡಿ 12: ಕೃಷ್ಣಾ ನದಿ ಪ್ರವಾಹದಿಂದ ಬಾಧಿತಗೊಂಡ ಮನೆಗಳ ಸಮರ್ಪಕ ಸರ್ವೇ ಮಾಡಬೇಕು ಮತ್ತು ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ತಕ್ಷಣಾ ಪರಿಹಾರ ಒದಗಿಸಬೇಕು ಎಂದು ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ನೇತೃತ್ವದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಯಡೂರವಾಡಿ ಗ್ರಾಮಸ್ಥರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಯಡೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯಡೂರವಾಡಿ ಗ್ರಾಮದ ಆಧಾರ ಕಾರ್ಡ, ರೇಷ್ನ ಕಾರ್ಡ ಹಾಗೂ ಮತದಾರರು ಗುರುತಿನ ಚೀಟಿ ಹೊಂದಿದ್ದು, ಆದರೆ ಫಲಾನುಭವಿಗಳು ಕಾಗವಾಡ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಶಹಾಪೂರ ಗ್ರಾಮದ ಡೋಣಿ ತೋಟ ಮತ್ತು ಕಮತೆ ತೋಟದಲ್ಲಿ ವಾಸಿಸುತ್ತಾರೆ. ಕಳೆದ 2019ರಲ್ಲಿ ಪ್ರವಾಹದಲ್ಲಿ ಸೂಕ್ತ ಪರಿಹಾರ ಚಿಕ್ಕೋಡಿ ತಹಶೀಲ್ದಾರ ಕಚೇರಿಯಿಂದ ಸಂದಾಯವಾಗಿದೆ. ಈಗಲೂ ಪ್ರವಾಹದಿಂದ ತೊಂದರೆಗೊಳಪಟ್ಟ ಫಲಾನುಭವಿಗಳಿಗೆ ಕಾಗವಾಡ ತಾಲೂಕಿಗೆ ಸೇರಿಸದೇ ಚಿಕ್ಕೋಡಿ ತಹಶೀಲ್ದಾರ ಕಚೇರಿಯಿಂದ ಸೂಕ್ತ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ಕೃಷ್ಣಾ ನದಿ ತೀರದ ವ್ಯಾಪ್ತಿಯಲ್ಲಿ ಸಂಕಷ್ಟ ಎದುರಿಸುತ್ತಿರುವ ಸಂತ್ರಸ್ತರ ನೆರವಿಗೆ ಸರ್ಕಾರ ಸೂಕ್ತ ಪರಿಹಾರ ಕೊಡಬೇಕು. ಯಡೂರವಾಡಿ ಗ್ರಾಮದ ತೋಟಪಟ್ಟಿ ಜನರು ಚಿಕ್ಕೋಡಿ ತಾಲೂಕಿಗೆ ಒಳಪಟ್ಟಿದ್ದಾರೆ. ಆದರೆ ಕಾಗವಾಡ ತಾಲೂಕಿಗೆ ಜಿಪಿಎಸ್ ತೋರಿಸುತ್ತದೆ. ಅವರ ಕಾಗದ ಪತ್ರಗಳು ಚಿಕ್ಕೋಡಿ ತಾಲೂಕಿನಲ್ಲಿವೆ. ಹೀಗಾಗಿ ಸಂತ್ರಸ್ತರು ಪರಿಹಾರದಿಂದ ವಂಚಿತರಾಗುತ್ತಿದ್ದು, ಉಪವಿಭಾಗಾಧಿಕಾರಿಗಳು ಸಮಸ್ಯೆ ಬಗೆಹರಿಸಿ ಸಂಕಷ್ಟ ಎದುರಿಸುತ್ತಿರುವ ಎಲ್ಲ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಸಂಜು ಪಿರಾಜೆ, ಬಾಳು ಧನಗರ, ಮಾರುತಿ ಉಮರಾಣಿ, ವಿಠ್ಠಲ ಸಂಕಪಾಳ, ಶಿವಾನಂದ ಪಿರಾಜೆ, ಸೆಂಭು ಪಿರಾಜೆ, ಜೈರಾಮ ಸಂಕಪಾಳ, ಅಶೋಕ ಪೂಜೇರಿ, ಜ್ಞಾನದೇವ ಸಂಕಪಾಳ, ವಿರೂಪಾಕ್ಷಿ ಸಂಕಪಾಳ ಸೇರಿದಂತೆ ಮುಂತಾದವರು ಇದ್ದರು.