ಬೆಳೆವಿಮೆ ಹಣ ಜಮಾಗೆ ಆಗ್ರಹಿಸಿ ಮನವಿ
ರಾಣೇಬೆನ್ನೂರ 01: ತಾಲೂಕಿನ ರೈತರ 2018-19ನೇ ಸಾಲಿನ ಬೆಳೆವಿಮೆ ಹಣವನ್ನು ಜಮಾ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ನಗರದ ಯೂನಿಯನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ಯೂನಿಯನ್ ಬ್ಯಾಂಕಿನಲ್ಲಿ 2018-19ನೇ ಸಾಲಿನಲ್ಲಿ ತುಂಬಿದ ಬೆಳೆ ವಿಮೆ ಹಣವನ್ನು ವಿಮಾ ಕಂಪನಿಗೆ ಕಳುಹಿಸದೆ ತಾವೇ ತಮ್ಮ ಖಾತೆಯಲ್ಲಿರಿಸಿ ಸುಮಾರು 500ಕ್ಕೂ ಅಧಿಕ ರೈತರಿಗೆ ವಂಚನೆ ಮಾಡಲಾಗಿದೆ. ಇದರ ಬಗ್ಗೆ ರೈತ ಸಂಘದ ವತಿಯಿಂದ ಮೂರು ಬಾರಿ ಪ್ರತಿಭಟನೆ ನಡೆಸಲಾಗಿತ್ತು. ಆ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳಿಂದ ಆಗಿರುವ ಪ್ರಮಾದವನ್ನು ಸರಿಪಡಿಸಿ ರೈತರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ಆದರೆ ಅದು ಇಂದಿನವರೆಗೂ ಕಾರ್ಯ ರೂಪಕ್ಕೆ ಬಂದಿರುವುದಿಲ್ಲ. ಜು.5ರ ಒಳಗಾಗಿ ರೈತರ ಖಾತೆಗೆ ವಿಮೆ ಹಣ ಜಮಾ ಮಾಡದೇ ಹೋದಲ್ಲಿ ಬ್ಯಾಂಕಿಗೆ ಬೀಗ ಜಡಿದು ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಮಂಜುನಾಥ ದುಗ್ಗತ್ತಿ, ಮೌಲಾಸಾಬ ಪಾಟೀಲ, ಮಂಜುನಾಥ ನಾಯಕ, ಆರ್.ಎಂ.ತುಪ್ಪದ, ಶಂಕ್ರ್ಪ ನವಣಕ್ಕಿ, ದೊಡ್ಡಪ್ಪ ತುಪ್ಪದ, ವಿನಾಯಕ ಗೌಡರ ಸೇರಿದಂತೆ ಮತ್ತಿತರರಿದ್ದರು.