ಅಪಘಾತದಿಂದ ಸಮಸ್ಯೆಗೊಳಗಾದವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು- ಡಾ. ಮನೋಜ್ ಸಾಹುಕಾರ
ಅಪಘಾತದಿಂದ ಸಮಸ್ಯೆಗೊಳಗಾದವರು ಆತ್ಮವಿಶ್ವಾಸ ಕಳೆದುಕೊಳ್ಳಬಾರದು- ಡಾ. ಮನೋಜ್ ಸಾಹುಕಾರ
ರಾಣೆಬೆನ್ನೂರು, ಸೆ.12: ಅಪಘಾತಗಳು ಉದ್ದೇಶಪೂರ್ವಕವಾಗಿ ಸಂಭವಿಸುವುದಿಲ್ಲ. ಅಪಘಾತದ ಬಳಿಕ ದೈಹಿಕ ನೋವಿನೊಂದಿಗೆ ಮಾನಸಿಕ ವೇದನೆಯನ್ನೂ ಅನುಭವಿಸಬೇಕಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸೂಕ್ತ ಚಿಕಿತ್ಸೆ ಹಾಗೂ ಫಿಸಿಯೋಥೆರಪಿ ಪಡೆಯುವುದರಿಂದ ಮತ್ತೆ ಸಹಜ ಜೀವನ ನಡೆಸಬಹುದು ಎಂದು ಓಂ ಆಸ್ಪತ್ರೆಯ ಕೀಲು-ಮೂಳೆ ತಜ್ಞ ವೈದ್ಯ ಡಾ. ಮನೋಜ್ ಸಾಹುಕಾರ ಹೇಳಿದರು.
ನಗರದ ಓಂ ಆಸ್ಪತ್ರೆ ಆವರಣದಲ್ಲಿ ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ವತಿಯಿಂದ ಬೆನ್ನುಹುರಿ ಅಪಘಾತಕ್ಕೊಳಗಾದವರ ಪುನಶ್ಚೇತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಸ್ತೆ ಅಪಘಾತ, ಮನೆ, ಕಟ್ಟಡ ಹಾಗೂ ವಿದ್ಯುತ್ ಕಂಬಗಳಿಂದ ಬೀಳುವುದು, ಬೆನ್ನ ಮೇಲೆ ಭಾರವಾದ ವಸ್ತು ಬೀಳುವುದು, ಬೆನ್ನುಮೂಳೆಯ ಕ್ಷಯ ಹಾಗೂ ವಿವಿಧ ಬೆನ್ನುಹುರಿ ಕಾಯಿಲೆಗಳು ಬೆನ್ನುಹುರಿ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಪ್ರಕಾಶ್ ಕೋಳಿವಾಡ, ವಿಶೇಷಚೇತನರು ಹಾಗೂ ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಓಂ ಆಸ್ಪತ್ರೆ ಉತ್ತಮ ಸೇವೆ ನೀಡುತ್ತಿದೆ. ಈ ಹಿಂದೆ ಇಂತಹ ಚಿಕಿತ್ಸೆಗೆ ರೋಗಿಗಳು ಬೆಂಗಳೂರು, ಮುಂಬೈ, ದೆಹಲಿ, ಕೊಲ್ಕತ್ತಾ, ಮಂಗಳೂರು ಸೇರಿದಂತೆ ದೂರದ ನಗರಗಳಿಗೆ ತೆರಳಬೇಕಾಗುತ್ತಿತ್ತು. ಮಧ್ಯ ಕರ್ನಾಟಕದ ರಾಣೆಬೆನ್ನೂರಿನಲ್ಲಿ ಇಂತಹ ಸೇವೆ ಲಭ್ಯವಾಗುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಭವಿಷ್ಯದಲ್ಲಿ ಬೆನ್ನುಹುರಿ ಸಮಸ್ಯೆ ಹೊಂದಿರುವವರಿಗಾಗಿ ಇನ್ನಷ್ಟು ವಿಶೇಷ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಯೋಜನೆಗಳನ್ನು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಮುಖ್ಯ ಅತಿಥಿ ಜೆಸಿಐ ಮಾಜಿ ಅಧ್ಯಕ್ಷ ಎಚ್.ಎನ್. ದೇವಕುಮಾರ ಮಾತನಾಡಿ, ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವವರು ಎದೆಗುಂದದೆ ಸೂಕ್ತ ಚಿಕಿತ್ಸೆ ಪಡೆದು ಸಹಜ ಜೀವನ ನಡೆಸಬೇಕು. ಇಂತಹ ಸಾಮೂಹಿಕ ಕಾರ್ಯಕ್ರಮಗಳಿಗೆ ತಮ್ಮಿಂದ ಸಾಧ್ಯವಾದ ಆರ್ಥಿಕ ನೆರವು ಮತ್ತು ಸಹಕಾರ ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ನಿಶಾರ್ಡ್ ಅಧ್ಯಕ್ಷೆ ರುಕ್ಮಿಣಿಬಾಯಿ ಸಾಹುಕಾರ ಮಾತನಾಡಿ, ವಿಶೇಷಚೇತನರ ಸೇವೆ ಮಾಡುವ ಅವಕಾಶ ದೊರೆತಿರುವುದು ತಮ್ಮ ಭಾಗ್ಯ. ‘ಜನಸೇವೆಯೇ ಜನಾರ್ದನ ಸೇವೆ’ ಎಂಬ ತತ್ವದಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಲಭ್ಯವಿರುವ ಸೇವೆಗಳನ್ನು ವಿಶೇಷಚೇತನರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಬೆನ್ನುಹುರಿ ಸಮಸ್ಯೆ ಹೊಂದಿರುವವರಿಗೆ ಸರ್ಕಾರದಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಫಲಾನುಭವಿ ಹಾಗೂ ನ್ಯಾಯವಾದಿ ಶ್ರೀನಿವಾಸ್ ಭಾನುವಳ್ಳಿ ಸೇರಿದಂತೆ ಮತ್ತಿತರರು ಶಾಸಕರಿಗೆ ಮನವಿ ಮಾಡಿದರು.
ಶಿಬಿರದಲ್ಲಿ ಬೆನ್ನುಹುರಿ ಸಂಬಂಧಿತ ಸಮಸ್ಯೆ ಹೊಂದಿರುವ ನೂರಾರು ಮಂದಿ ಪಾಲ್ಗೊಂಡಿದ್ದರು. ಓಂ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮುಖ್ಯ ಸಂಯೋಜಕ ನಿಂಗಪ್ಪ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಪ್ರೀತಿ ನಿರೂಪಿಸಿ, ವಂದಿಸಿದರು.