ಅಪರೂಪದ ಪ್ರತಿಭೆ ಅನ್ನಪೂರ್ಣ ಕನೋಜ
ಬೈಲಹೊಂಗಲ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಕಿರು ಪರಿಚಯ
ಬೈಲಹೊಂಗಲ 22: ಬೈಲಹೊಂಗಲ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಅನ್ನಪೂರ್ಣಾ ಆರ್. ಕನೋಜ(ರಜಪೂತ) ಅವರು ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದು, ಇವರು ಶಾಂತ ಸ್ವಭಾವದವರು. ಮಕ್ಕಳ ಮನಸ್ಸನ್ನು ಅರ್ಥೈಸಿಕೊಂಡು ಅವರನ್ನು ಮಾತು, ಚಟುವಟಿಕೆ ಮೂಲಕ ಆಕರ್ಷಿತರನ್ನಾಗಿ ಮಾಡುವಲ್ಲಿ ನಿಸ್ಸೀಮರು. 30 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಮಕ್ಕಳ ಏಳ್ಗೆಗಾಗಿ ಸಮರ್ಪಿಸಿಕೊಂಡವರು.
ಉತ್ತಮ ಬೋಧನಾ ಕೌಶಲ್ಯದಿಂದಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಆದರ್ಶ ಶಿಕ್ಷಕಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶೈಕ್ಷಣಿಕ ಲೇಖನ, ಕಥೆ, ಕವನ, ನಾಟಕ, ಗೀಗೀ ಪದ, ರೂಪಕ ಸಾಹಿತ್ಯ ಇನ್ನಿತರ ಹಲವಾರು ಕವನಗಳನ್ನು ರಚಿಸಿ ಮಕ್ಕಳ ಸರ್ವಾಂಗೀಣ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಆಕಾಶವಾಣಿ, ದೂರದರ್ಶನಗಳಲ್ಲಿ ವಿಶೇಷ ಸಂದರ್ಶನ ನೀಡಿದ್ದು, ಸ್ವರಚಿತ ಕಥೆ, ಕವನ ವಾಚನ ಮಾಡಿದ್ದಾರೆ. ಸುಧಾ ವಾರ ಪತ್ರಿಕೆಯಲ್ಲಿ ಪ್ರಕಟಗೊಂಡ ಗಿರೀಶನ ಒಗಟು ಕಥೆಯನ್ನು ಮಹಾರಾಷ್ರ್ಟ ಸರ್ಕಾರ 8 ನೇ ತರಗತಿಯ ಪಠ್ಯದಲ್ಲಿ ಆಳವಡಿಸಿ ಬೋಧಿಸಲಾಗುತ್ತಿದೆ. ಇವರ ಎರಡು ಕವನ ಸಂಕಲನಗಳು, ಮೂರು ಕಥಾ ಸಂಕಲನಗಳು ಪ್ರಕಟಗೊಂಡಿದ್ದು ಪುಟಾಣಿ ಹಕ್ಕಿ ಕವನ ಸಂಕಲನಕ್ಕೆ ರುಕ್ಮಿಣಿ ಬಾಯಿ ಸಾಹಿತ್ಯ ರಾಜ್ಯ ಪ್ರಶಸ್ತಿ ಹಾಗೂ ಕಥಾಗುಚ್ಚ ಕಥಾ ಸಂಕಲನಕ್ಕೆ ಬಣಗಾರ ಸಾಹಿತ್ಯ ಜಿಲ್ಲಾ ಪ್ರಶಸ್ತಿಗಳು ಲಭಿಸಿವೆ.
ಅನೇಕ ಸಂಘ, ಸಂಸ್ಥೆಗಳ ಸದಸ್ಯ, ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಅಖಿಲ ಭಾರತೀಯರ ಕವಿಯತ್ರಿಯರ ಪರಿಷತ್ತಿನ ಆಶ್ರಯದಲ್ಲಿ ಸಿಂಗಾಪೂರ, ಮಲೇಷ್ಯಾ, ಥೈಲ್ಯಾಂಡ್,ï ಭೂತಾನ, ನೇಪಾಳ ದೇಶಗಳಿಗೆ ಪ್ರವಾಸಗೈದು ಕವಿಗೋಷ್ಠಿಗಳಲ್ಲಿ ಭಾಗವಹಿಸಿ ಸ್ವರಚಿತ ಕವನ ವಾಚನ ಮಾಡಿ ವಿದೇಶಗಳಲ್ಲಿಯೂ ಕನ್ನಡದ ಕಂಪನ್ನು ಬೀರಿದ್ದಾರೆ.
ಶಾಲೆಗಳಲ್ಲಿ ಸ್ಕೌಟ-ಗೈಡ್ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಮಕ್ಕಳಲ್ಲಿ ದೇಶಪ್ರೇಮ ಹಾಗೂ ಶಿಸ್ತನ್ನು ಅರಿತುಕೊಳ್ಳುವಂತೆ ತರಬೇತಿ ನೀಡಿ ಮಕ್ಕಳಲ್ಲಿ ಸ್ವಾಭಿಮಾನ, ದೇಶಾಭಿಮಾನದಂತಹ ಮಾನವೀಯ ಮೌಲ್ಯಗಳನ್ನು ಹುದುಗಿಸಿದ್ದಾರೆ.
ಗಿರೀಶನ ಒಗಟು, ಕಥಾಗುಚ್ಚ, ಕಥಾಮಂಜರಿ ಕಥಾ ಸಂಕಲನಗಳು, ಕನ್ನಡದ ಕಂದ, ಪುಟಾಣಿ ಹಕ್ಕಿ ಕವನ ಸಂಕಲನಗಳು, ಭಾರತಮಾತೆಯ ವೀರ ಪುತ್ರ ಮಹಾರಾಣಾ ಪ್ರತಾಪಸಿಂಗ ಚರಿತ್ರೆ ಶೀಘ್ರದಲ್ಲಿ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಹಿಮಾಲಯ ಪುತ್ರಿ ಎಂಬ ಅಂತರಾಷ್ರ್ಟೀಯ ಪ್ರಶಸ್ತಿಯನ್ನು ನೇಪಾಳದಲ್ಲಿ ಪಡೆದುಕೊಂಡಿದ್ದು, ಅನೇಕ ರಾಜ್ಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಯಚೂರಲ್ಲಿ ನಡೆದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಕವನ ವಾಚನ ಮಾಡಿದ್ದಾರೆ. ಇದೀಗ ಬೈಲಹೊಂಗಲ ತಾಲೂಕಾ ಯರಡಾಲ ಗ್ರಾಮದಲ್ಲಿ ನಡೆಯುವ ತಾಲೂಕಾ 6 ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಹಮ್ಮೆಯಾಗಿದೆ.
ಶಿಕ್ಷಕ ವೃತಿಯಿಂದ ನಿವೃತರಾಗಿ ಸುಮಾರು 4 ವರ್ಷಗಳು ಕಳೆದಿದ್ದು, ಇದೀಗ ತಮ್ಮ ಬದುಕನ್ನು ಸಾಹಿತ್ಯ ಕ್ಷೇತ್ರಕ್ಕೆ ಸಮರ್ಪಿಸಿದ್ದಾರೆ. ಬೈಲಹೊಂಗಲ ಭಾಗದಲ್ಲಿ ಇಂಥ ಅಪರೂಪದ ಪ್ರತಿಭೆ ಇರುವದು ನಮ್ಮ, ಹೆಮ್ಮೆಯಲ್ಲವೇ.