ಭಗವಾನ ಮಹಾವೀರ ಜಯಂತಿ ಆಚರಣೆ ಕುರಿತು ಒಂದು ಲೇಖನ
ಲೋಕದರ್ಶನ ವರದಿ
ಅಹಿಂಸಾ ಪರಮೋ ಧರ್ಮಃ
ಅಹಿಂಸೆಯೇ ಮೂಲಮಂತ್ರವಾದ ಜೈನಧರ್ಮ ತ್ಯಾಗ ಪ್ರಧಾನವಾದ ಧರ್ಮ. ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರಿಂದ ಪ್ರಾರಂಭವಾಗಿ ಭಗವಾನ್ ಮಹಾವೀರರವರೆಗೆ, ಭಗವಾನ್ ಮಹಾವೀರರಿಂದ ಹಿಡಿದು ಇಂದಿನ ದಿಗಂಬರ-ಶ್ವೇತಾಂಬರರವರೆಗೆ ಈ ಅತಿ ಪ್ರಾಚೀನಧರ್ಮವು ಸರ್ವದಾ ತ್ಯಾಗ, ವೈರಾಗ್ಯ, ತಪಸ್ಸು ಹಿ ಇವುಗಳಿಗೆ ಮಹತ್ವ ನೀಡಿದೆ. ಇಂದಿನ ಆಧುನಿಕ ಯುಗದಲ್ಲಿಯೂ ನಿಷ್ಠೆಯಿಂದ ತಪಸ್ಸಿನಲ್ಲಿ ನಿರತರಾದ ಜೈನಮುನಿಗಳನ್ನು, ಶ್ವೇತಾಂಬರರನ್ನು ಕಾಣಬಹುದು.
ತ್ಯಾಗ ಮೂಲವಾದ ಮಹಾನ್ ಧರ್ಮಗಳಲ್ಲಿ ಏರುಪೇರುಗಳು ಇರುವುದು ಸಾಧ್ಯ; ಆದರೆ ನಾಶ ಎಂದಿಗೂ ಅಸಂಭವ. ಜೈನಧರ್ಮ ತ್ಯಾಗಪ್ರಧಾನ ಎಂದ ಕೂಡಲೇ ಇಲ್ಲಿ ಗೃಹಸ್ಥರನ್ನು ಕಡೆಗಣಿಸಲಾಗಿದೆ ಎಂದರ್ಥವಲ್ಲ. ಗೃಹಸ್ಥರು ಈ ಧರ್ಮದ ಪ್ರಾಣಸ್ವರೂಪ; ಅವರು ನಿರ್ಗ್ರಂಥಿಗಳ (ಎಲ್ಲ ಬಂಧಗಳಿಂದ ಮುಕ್ತರ), ಮುನಿಗಳ, ಅರಹಂತರ (ದಾರಿ ತೋರುವ ಸದಾಚಾರಿಗಳ) ಪಾಲನೆ ಪೋಷಣೆ ಮಾಡುತ್ತಾರೆ. ಐದು ಅಣುವ್ರತಗಳನ್ನು ಪಾಲಿಸುತ್ತಾರೆ ಮತ್ತು ಜೈನ ಮಂದಿರಗಳ ಸೇವೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಾರೆ.
ಇಡೀ ಜಗತ್ತಿಗೆ ತಿಳಿದಿರುವಂತೆ ಈ ಬಹುಪ್ರಾಚೀನ ಧರ್ಮದ ಉಗಮ ಪ್ರಥಮ ತೀರ್ಥಂಕರರಾದ ಭಗವಾನ್ ಋಷಭದೇವರ ಆವಿರ್ಭಾವದೊಂದಿಗೆ ಉಂಟಾಯಿತು. ಆದರೂ 24ನೆಯ ತೀರ್ಥಂಕರರಾದ ಭಗವಾನ್ ಮಹಾವೀರರನ್ನೇ ಈ ಧರ್ಮದ ಪ್ರತಿಷ್ಠಾಪಕರೆಂದು ಕರೆದು ಗೌರವ ನೀಡಲಾಗಿದೆ. ‘ತೀರ್ಥಂಕರ’ ಶಬ್ದದ ಅರ್ಥ ‘ತೀರ್ಥಂ ಕರೋತಿ ಇತಿ’ ಹಿ ಯಾರ ಚರಣ ತಿರಿತಿಸ್ಪರ್ಶದಿಂದ ಅತಿ ಸಾಮಾನ್ಯ ಸ್ಥಳವೂ ಮಹಾನ್ ತೀರ್ಥಕ್ಷೇತ್ರವಾಗಿ ಪರಿಣಮಿಸುವುದೋ ಅವರು. ಹೋಲಿಕೆ ಸಾಧಾರಣವಾಗಿ ಸರಿಯಲ್ಲದೇ ಹೋದರೂ, ಹಿಂದೂಧರ್ಮದ ಅವತಾರಗಳೊಂದಿಗೆ ಈ ತೀರ್ಥಂಕರರನ್ನು ಹೋಲಿಸಬಹುದು. ತೀರ್ಥಂಕರರ ಜನ್ಮ-ಕರ್ಮಗಳು ದಿವ್ಯ, ಅಭೂತಪೂರ್ವ. ಅವರ ಸಾಧನೆಗಳು ಸಾಧಾರಣ ಮಾನವನ ಕಲ್ಪನೆಯನ್ನೂ ಮೀರಿದವು.
ಇತಿಹಾಸದ ಪ್ರಕಾರ ನೋಡಿದರೆ ಜೈನಧರ್ಮದ ಪ್ರಾಚೀನತೆಯ ಅರಿವಾಗುತ್ತದೆ. ಮಹಾಭಾರತದ ಯುದ್ಧ ನಡೆಯುತ್ತಿದ್ದ ಸಮಯದಲ್ಲಿ 22ನೆಯ ತೀರ್ಥಂಕರರಾದ ಭಗವಾನ್ ನೇಮಿನಾಥರು ಧರ್ಮಪ್ರಚಾರ ಮಾಡುತ್ತಿದ್ದರು. ಶ್ರೀಮದ್ಭಾಗವತದಲ್ಲಿ ಮೊದಲ ತೀರ್ಥಂಕರರ ಹೆಸರಿದೆ. ಪ್ರಥಮ ತೀರ್ಥಂಕರರು ಮತ್ತು 22ನೆಯ ತೀರ್ಥಂಕರರ ನಡುವೆ 1000 ವರ್ಷಗಳ ವ್ಯತ್ಯಾಸವಿತ್ತು ಎಂದು ನಾವು ಭಾವಿಸಿದರೂ ಪ್ರಥಮ ತೀರ್ಥಂಕರರು ಬಹಳ ಪುರಾತನರು ಎಂದೇ ಪರಿಗಣಿಸಬೇಕಾಗುತ್ತದೆ.