ರಾಷ್ಟ್ರೀಯ

ಬಿಜೆಪಿ ಚಿತ್ತ ತಮಿಳುನಾಡಿನತ್ತ: ನಾಳೆ ರಾಜ್ಯಕ್ಕೆ ಅಮಿತ್‌ ಶಾ ಭೇಟಿ, ಚುನಾವಣಾ ರಣತಂತ್ರಕ್ಕೆ ಸಿದ್ಧತೆ

ಬಿಜೆಪಿ ಚಿತ್ತ ತಮಿಳುನಾಡಿನತ್ತ: ನಾಳೆ ರಾಜ್ಯಕ್ಕೆ ಅಮಿತ್‌ ಶಾ ಭೇಟಿ, ಚುನಾವಣಾ ರಣತಂತ್ರಕ್ಕೆ ಸಿದ್ಧತೆ

ಚೆನ್ನೈ, ನವೆಂಬರ್ 20: ಬಿಹಾರ ವಿಧಾನಸಭಾ ಚುನಾವಣೆಯ ಗೆಲುವಿನಿಂದ ಸ್ಫೂರ್ತಿ ಪಡೆದಿರುವ ಬಿಜೆಪಿ ಈಗ ತಮಿಳುನಾಡಿನತ್ತ ಗಮನ ಹರಿಸಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಶನಿವಾರ ಎರಡು ದಿನಗಳ ಮಟ್ಟಿಗೆ ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

ರಾಜ್ಯದ 2021ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಮೂಲಕ ಕೇಸರಿ ಪಕ್ಷ ಸಾಂಪ್ರದಾಯಿಕ ದ್ರಾವೀಡ ಪಕ್ಷಗಳ ಹಿಡಿತದಲ್ಲಿರುವ ರಾಜ್ಯದಲ್ಲಿ ಹೆಜ್ಜೆಯೂರಲು ಹವಣಿಸುತ್ತಿದೆ. ತಮಿಳುನಾಡಿನಲ್ಲಿ ಕೂಡ ಬಿಹಾರ ಯಶಸ್ಸಿನ ಮಂತ್ರವನ್ನೇ ಪುನರಾವರ್ತಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ವಿವಿಧ ಸರ್ಕಾರಿ ಕಾರ್ಯಕ್ರಮಗಳನ್ನು ಪಾಲ್ಗೊಳ್ಳಲಿರುವ ಅಮಿತ್‌ ಶಾ, ನಂತರ ಬಿಜೆಪಿ ಪದಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿಗಳೊಂದಿಗೆ ಚರ್ಚೆ ನಡೆಸಲಿದ್ದು, ಪಕ್ಷವನ್ನು ಸದೃಢಗೊಳಿಸಲು ತಂತ್ರ ರೂಪಿಸಲಿದ್ದಾರೆ.

ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾಗಿ ಎಲ್‌.ಮುರುಗನ್‌ ಅಧಿಕಾರ ಸ್ವೀಕರಿಸಿದ ನಂತರ ಇದು ಶಾ ಅವರ ಮೊದಲ ಭೇಟಿಯಾಗಿದೆ.

ಶಾ ಭೇಟಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದ್ದು, 5 ಸಾವಿರ ಪೊಲೀಸ್‌ ಸಿಬ್ಬಂದಿ ಭದ್ರತಾ ಕಾರ್ಯದಲ್ಲಿರಲಿದ್ದಾರೆ. ಶಾ ಅವರ ನೆಲೆಸಲಿರುವ ಹೋಟೆಲ್‌ ಸಿಬ್ಬಂದಿಯನ್ನು ಶುಕ್ರವಾರ ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರ ಹತ್ಯೆ ಅಪರಾಧಿಗಳಾದ ನಳಿನಿ ಮತ್ತಿತರರ ಬಿಡುಗಡೆ ಕುರಿತು ಕೂಡ ಕೆಲ ನಾಯಕರು ಪ್ರಸ್ತಾವನೆ ಸಲ್ಲಿಸುವ ನಿರೀಕ್ಷೆಯಿದೆ.    

ಸುದ್ದಿ ಓದಿ