ರೈತರೊಂದಿಗೆ 5 ನೇ ಸುತ್ತಿನ ಮಾತುಕತೆಗೂ ಮುನ್ನ ಪ್ರಧಾನಿಯೊಂದಿಗೆ ಅಮಿತ್ ಶಾ, ರಾಜನಾಥ್ ಚರ್ಚೆ
ನವದೆಹಲಿ, ಡಿಸೆಂಬರ್ 05: ಕೃಷಿ ಕಾನೂನು ವಿರೋಧಿಸಿ
ಭುಗಿಲೆದ್ದಿರುವ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ, ರೈತರೊಂದಿಗೆ ಐದನೇ ಸುತ್ತಿನ ಮಾತುಕತೆಗೆ ಮುನ್ನ,
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ಪಿಯೂಷ್ ಗೋಯೆಲ್ ಮತ್ತು ನರೇಂದ್ರ ಸಿಂಗ್ ತೋಮರ್
ಶನಿವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಲೋಕ ಕಲ್ಯಾಣ್ ಮಾರ್ಗದ ಅವರ ನಿವಾಸದಲ್ಲಿ ಭೇಟಿಯಾಗಿ
ಮಾತುಕತೆ ನಡೆಸಿದ್ದಾರೆ.
ಮಾತುಕತೆಯ ಸಂಪೂರ್ಣ ವಿವರ ಹೊರಬಂದಿಲ್ಲವಾದರೂ, ರೈತ ಸಂಘಟನೆಗಳ ಪ್ರತಿನಿಧಿಗಳು ಕೃಷಿ ಕಾನೂನು ಹಿಂಪಡೆಯಲು ಒತ್ತಾಯಿಸುತ್ತಿರುವ ಕಾರಣ, ಪ್ರತಿಭಟನೆಯ ಕುರಿತು ಪ್ರಧಾನಿಯವರಲ್ಲಿ ಹಂಚಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರೈತ ಸಂಘ ಮತ್ತು ಕೇಂದ್ರದ ಪ್ರತಿನಿಧಿಗಳ ನಡುವೆ ಐದನೇ ಸುತ್ತಿನ ಮಾತುಕತೆ ಶನಿವಾರ ಮಧ್ಯಾಹ್ನ ವಿಜ್ಞಾನ ಭವನದಲ್ಲಿ ನಡೆಯಲಿದೆ. ಹಿರಿಯ ಸಚಿವರಾದ ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಕೃಷಿ ಮತ್ತು ರೈಲ್ವೆ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯೆಲ್ ಮಾತುಕತೆ ನಡೆಸಲಿದ್ದಾರೆ. ರೈತರ ಪ್ರತಿಭಟನೆಯು 10 ನೇ ದಿನಕ್ಕೆ ಕಾಲಿಟ್ಟಿದೆ ಮತ್ತು ಕಳೆದ ಹತ್ತು ದಿನಗಳಿಂದ ದೆಹಲಿ ಗಡಿಯಲ್ಲಿರುವ ವಿವಿಧ ಪ್ರವೇಶ ಕೇಂದ್ರಗಳಲ್ಲಿ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.
ವಿಜ್ಞಾನ ಭವನದಲ್ಲಿ ಗುರುವಾರ 4 ನೇ ಸುತ್ತಿನ ಮಾತುಕತೆ ನಡೆದಿದ್ದು, ಇದರಲ್ಲಿ ನಲವತ್ತು ರೈತ ಸಂಘಗಳ ಪ್ರತಿನಿಧಿಗಳು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಮತ್ತು ವಾಣಿಜ್ಯ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರೊಂದಿಗೆ ಸಂವಾದದಲ್ಲಿ ಭಾಗವಹಿಸಿದ್ದರು. ಕೃಷಿ ಸಚಿವಾಲಯ ಮತ್ತು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಕೂಡ ಸಂವಾದದಲ್ಲಿ ಭಾಗವಹಿಸಿದ್ದರು. ಮಾತುಕತೆಯ ಕೊನೆಯ ಸುತ್ತಿನಲ್ಲಿ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮುಂದುವರಿಯುತ್ತದೆ ಮತ್ತು ಎಂಎಸ್‌ಪಿ ಬಗ್ಗೆ ಅವರ ಆತಂಕಗಳು ನಿಜವಲ್ಲ ಎಂದು ತೋಮರ್ ಪುನರಚ್ಚರಿಸಿದ್ದರು.
ಸಂವಿಧಾನಾತ್ಮಕ ಸಿಂಧುತ್ವವನ್ನು ನೀಡುವ ಮೂಲಕ ಸರ್ಕಾರವು ಎಂಎಸ್ಪಿಯನ್ನು ಕಾಯ್ದೆಗಳಲ್ಲಿ ಸೇರಿಸಬೇಕೆಂದು ರೈತರ ಪ್ರತಿನಿಧಿಗಳು ಒತ್ತಾಯಿಸಿದರೆ, ಕಾನೂನುಗಳನ್ನು ಶಾಸನಬದ್ಧಗೊಳಿಸಿದ ಸಾಂವಿಧಾನಿಕ ನಿಬಂಧನೆಗಳ ಕುರಿತು ಸರ್ಕಾರದ ಅಧಿಕಾರಿಗಳು ವಿವರಿಸಿದ್ದರು.