ಅಂಬೇಡ್ಕರ್ ಚಿಂತನೆ ದಲಿತರಿಗೆ ಸೀಮಿತವಾಗಿಲ್ಲ : ಜಿ.ಎಸ್. ಮಂಜುನಾಥ್
ಹಂಪಿ 20: ಅಂಬೇಡ್ಕರ್ ಚಿಂತನೆಗಳು ಜಾಗತಿಕವಾಗಿ ಮಾನ್ಯತೆ ಪಡೆದರೂ, ಸಂವಿಧಾನ ನಿರ್ಮಾತೃವನ್ನು ಇಂದು ಒಂದು ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ದುರಂತದ ಸಂಗತಿ. ಹೀಗಾಗಿ ಪ್ರಾಥಮಿಕ ಶಾಲಾ ಹಂತದಲ್ಲಿಯೆ ಮಕ್ಕಳಿಗೆ ಅಂಬೇಡ್ಕರ್ ಕುರಿತಾದ ಚಿಂತನೆಗಳ ಬಗ್ಗೆ ಅರಿವು ಮೂಡಿಸಲು ಆದ್ಯತೆ ನೀಡಬೇಕು ಎಂದು ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಎಸ್ ಮಂಜುನಾಥ್ ಅಭಿಪ್ರಾಯಪಟ್ಟರು.
ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಭಾರತದ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ಸಹಯೋಗದಲ್ಲಿ ದಿನಾಂಕ 20.08.2024ರಂದು ಪಂಪ ಸಭಾಂಗಣದಲ್ಲಿ ಸಾಮಾಜಿಕ ನ್ಯಾಯ ನಾಯಕತ್ವ ತರಬೇತಿ ಕುರಿತ ಮೂರು ದಿನಗಳ ಕಾರ್ಯಾಗಾರ ಉದ್ಘಾಟಿಸಿ, ಮಾತನಾಡುತ್ತ, ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಪಡೆಯದೆ ಇರುವುದರಿಂದ ವೃತ್ತಿಪರ ಕೋರ್ಸ್ಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರ್ಕಾರಗಳು ಮಾತೃಭಾಷೆಯಲ್ಲಿಯೆ ವೃತ್ತಿಪರ ಶಿಕ್ಷಣ ಕೈಗೊಳ್ಳುವ ಅವಕಾಶ ನೀಡಲು ಕನ್ನಡ ವಿಶ್ವವಿದ್ಯಾಲಯ ಸಂಶೋಧನೆಯ ಮೂಲಕ ವರದಿ ಸಲ್ಲಿಸಬೇಕು ಎಂದರು.
ಎಸ್ ಸಿ ಎಸ್ ಪಿ ಮತ್ತು ಟಿ ಎಸ್ ಪಿ ನೋಡಲ್ ಏಜೆನ್ಸಿ ಸಲಹೆಗಾರಾದ ಡಾ. ಈ. ವೆಂಕಟಯ್ಯ ಅವರು ಮಾತನಾಡುತ್ತ ಸಾಮಾಜಿಕ, ಆರ್ಥಿಕ, ನ್ಯಾಯ ಇಲ್ಲದೆ ಪ್ರಜಾಪ್ರಭುತ್ವಕ್ಕೆ ಅರ್ಥವಿಲ್ಲ. ಪ.ಜಾತಿ ಮತ್ತು ಪ.ಪಂಗಡ ಜನರು ಭೂ ಒಡೆತನ ಹೊಂದಿರುವುದು ತುಂಬಾ ಕಡಿಮೆ. ಒಡೆತನ ಹೊಂದಿದ್ದರೂ ಉತ್ತಮ ಫಸಲು ಕೊಡುವ ಭೂಮಿಯಾಗಿರುವುದಿಲ್ಲ. ಈ ಜನರ ಅಭಿವೃದ್ಧಿಗೆ ಸಾರ್ವಜನಿಕ ಶಿಕ್ಷಣ, ಉದ್ಯೋಗ ಅವಶ್ಯಕತೆ ಇದೆ. ಆದರೆ ಇಂದು ಬಹುತೇಕ ಕ್ಷೇತ್ರಗಳು ಖಾಸಗೀಕರಣಗೊಳ್ಳುತ್ತಿವೆ. ಖಾಸಗಿ ವಲಯಗಳಲ್ಲಿ ಪ.ಜಾತಿ ಮತ್ತು ಪ.ಪಂಗಡಗಳಿಗೆ ಮೀಸಲಾತಿ ವ್ಯವಸ್ಥೆಯಿಲ್ಲ. ಮತ್ತೊಂದು ಕಡೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಂತಹ ತಂತ್ರಜ್ಞಾನವು ಕೂಡ ಉದ್ಯೋಗವನ್ನು ಕಸಿದುಕೊಳ್ಳುತ್ತಿರುವುದು ನಾವೆಲ್ಲರೂ ಗಂಭೀರವಾಗಿ ಚರ್ಚಿಸಬೇಕಾದ ವಿಷಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಬಳ್ಳಾರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸದಸ್ಯರಾದ ರಾಜೇಶ್ ಎನ್. ಹೊಸಮನೆ ಅವರು ಮಾತನಾಡುತ್ತ ಎಸ್.ಸಿ/ಎಸ್.ಟಿ ಜನರು ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಜೈಲು ಸೇರಿದರೆ ವಕೀಲರನ್ನು ನೇಮಕ ಸೇರಿದಂತೆ ಉಚಿತ ಕಾನೂನು ಸೇವೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೂಲಕ ಪಡೆಯಲು ಅವಕಾಶವಿದೆ. ದಲಿತ ಸಮುದಾಯಗಳ ಜನರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ ಪರಮಶಿವಮೂರ್ತಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತ ಕನ್ನಡ ವಿಶ್ವವಿದ್ಯಾಲಯ ಪ್ರಾರಂಭದಿಂದಲೂ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಟ್ಟುಕೊಂಡು ಶೋಷಣೆಗೆ ಒಳಗಾದವರ ಪರವಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದೆ. ಇಂದಿಗೂ ಸಮಾಜದಲ್ಲಿ ಅರಿವಿಲ್ಲದೆ ಅನ್ಯಾಯಕ್ಕೆ ಒಳಗಾಗುವ ಸಮುದಾಯಗಳನ್ನು ಕಾಣಬಹುದು. ಈ ಕಾರ್ಯಾಗಾರದಲ್ಲಿ ಭಾಗವಹಿಸಿದ ನೀವು ಇಂತಹ ಸಮುದಾಯಗಳಲ್ಲಿ ಕಾನೂನಿನ ಅರಿವು ಮೂಡಿಸಿದರೆ ಈ ಕಾರ್ಯಗಾರ ಯಶಸ್ವಿಯಾದಂತೆ ಎಂದರು. ವಿಶ್ವವಿದ್ಯಾಲಯಗಳಲ್ಲಿನ ಸಂಶೋಧನೆಗಳು ಪದವಿ ನೀಡುವುದಕ್ಕೆ ಸೀಮಿತವಾಗದೆ, ಪದವಿ ಪಡೆದ ಪದವೀಧರರು ಸಮಾಜಕ್ಕೆ ಯಾವ ರೀತಿ ಕಾಣಿಕೆಯನ್ನು ನೀಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಭಾರತದ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ. ಸೋನಿ ಪೆಲ್ಲಿಸೆರಿ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ, ಡಾ. ಬಾಬು ಜಗಜೀವನರಾಂ ಸಂಶೋಧನಾ ಸಂಸ್ಥೆ ನಿರ್ದೇಶಕರಾದ ಡಾ.ರಾಜೇಶ್ ಜಿ.ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ಧಿ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಡಾ.ಗೀತಮ್ಮ ಕೆ. ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಾರ್ಯಾಗಾರದ ಸಂಚಾಲಕರಾದ ಅಭಿವೃದ್ಧಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಹೆಚ್.ಡಿ. ಪ್ರಶಾಂತ್, ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ, ರಾಷ್ಟ್ರೀಯ ಕಾನೂನು ಶಾಲೆ, ಭಾರತದ ವಿಶ್ವವಿದ್ಯಾಲಯದ ಡಾ.ಆರ್.ವಿ. ಚಂದ್ರಶೇಖರ್, ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಭಾಗದ ಸಂಶೋಧನಾರ್ಥಿ ಮೋಹನ್ಕುಮಾರ್ ನಿರೂಪಿಸಿದರು. ವಿರೂಪಾಕ್ಷ ಸ್ವಾಗತಿಸಿದರು, ರಾಜು ವಂದಿಸಿದರು.