ಬೈಲಹೊಂಗಲ

ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಭೆ

ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಗಳ ಸಭೆ

ಬೈಲಹೊಂಗಲ 10: ಜನವರಿ 2025ರಲ್ಲಿ ಸುಕ್ಷೇತ್ರ ಇಂಚಲದ ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಅದ್ಧೂರಿಯಿಂದ ಆಚರಿಸಲು ಹಳೇ ವಿದ್ಯಾರ್ಥಿಗಳು ಕಾಳಜಿವಹಿಸುತ್ತಿರುವುದು ಸಂತಸ ತಂದಿದೆ ಎಂದು ಇಂಚಲ ಸಾಧುಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಮಹಾಸ್ವಾಮೀಜಿ ಹೇಳಿದರು.  

ಸಮೀಪದ ಇಂಚಲ ಗ್ರಾಮದ ಸಾಧುಸಂಸ್ಥಾನ ಮಠದಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಭೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ಎಲ್ಲ ಹಳೇ ವಿದ್ಯಾರ್ಥಿಗಳು ತನು, ಮನ, ಧನದಿಂದ ದುಡಿಯಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಇದ್ದರೆ, ಸೇವಾ ಮಾಡುವ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.  

ಹಳೇ ವಿದ್ಯಾರ್ಥಿಗಳಾದ ಸಮಾಜ ಸೇವಕ ನಾಗಪ್ಪ ಮೇಟಿ, ಅಬಕಾರಿ ಸಿಪಿಐ ಬಸವರಾಜ ಕರವಿನಕೊಪ್ಪ, ಶಿಕ್ಷಕ ಅಣ್ಣಪ್ಪ ಹೈಬತ್ತಿ ಮಾತನಾಡಿ, ಸುವರ್ಣ ಮಹೋತ್ಸವದ ಕಾರ್ಯಕ್ರಮವನ್ನು ಶಿಸ್ತುಬದ್ಧವಾಗಿ, ಸುವ್ಯವಸ್ಥಿತವಾಗಿ ಮಾಡಲು ಎಲ್ಲರೂ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ನಮ್ಮ ಮನೆ ಕಾರ್ಯಕ್ರಮ ಎಂದು ಭಾವಿಸಿ, ಭಕ್ತಿ-ಭಾವದಿಂದ ಶ್ರಮಿಸುವುದಾಗಿ ತಿಳಿಸಿದರು.  

ಸಂಸ್ಥೆ ಆಡಳಿತಾಧಿಕಾರಿ ಪೂರ್ಣಾನಂದ ಭಾರತಿ ಸ್ವಾಮೀಜಿ ಮಾತನಾಡಿದರು.  

ಮಾಜಿ ಚೇರಮನ್‌ರಾದ ಡಿ.ಬಿ.ಮಲ್ಲೂರ, ಎಸ್‌.ಎಂ.ರಾಹುತನವರ, ಕಾರ್ಯದರ್ಶಿ ಎಸ್‌.ಎನ್‌.ಕೊಳ್ಳಿ, ಸುರೇಶ ಕರಾಡೆ ಹಾಗೂ ಸಾವಿರಾರು ಹಳೇ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಂ.ಸಿ.ಮಟ್ಟಿ ಸ್ವಾಗತಿಸಿದರು. ಎಂ.ಬಿ.ಖನ್ನಗೌಡರ ನಿರೂಪಿಸಿದರು. ಬಸವರಾಜ ತುಪ್ಪದ ವಂದಿಸಿದರು. ಎಲ್ಲ ಹಳೇ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. 


ಸುದ್ದಿ ಓದಿ