ಬಿಜೆಪಿ ಜೊತೆ ಮೈತ್ರಿ ಮುಂದುವರಿಯಲಿದೆ, ಜೆಡಿಯು ವಿರುದ್ದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ: ಚಿರಾಗ್ ಪಾಸ್ವಾನ್
ಪಾಟ್ನಾ,ಅಕ್ಟೋಬರ್ 6: ಮತದಾನ ದಿನಾಂಕ ಸಮೀಪಿಸುತ್ತಿರುವ ಬಿಹಾರದಲ್ಲಿ ಚುನಾವಣಾ ವಾತಾವರಣ ತೀವ್ರ ಬಿಸಿಯೇರುತ್ತಿದೆ. ಆರ್ ಜೆಡಿ ನೇತೃತ್ವದ ಮಹಾ ಮೈತ್ರಿಕೂದಿಂದ ವಿಕಾಸ್ ಶೀಲ ಇನ್ಸಾನ್ ಪಕ್ಷ (ವಿಐಪಿ) ಹೊರಬಿದ್ದಿರುವುದು, ಆಡಳಿತಾರೂಢ ಎನ್ ಡಿ ಎ ಮೈತ್ರಿಕೂಟದಿಂದ ಎಲ್ ಜೆಪಿ ಹಿಂದೆಸರಿದಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ವಿಐಪಿ ಹೊರಬಂದಿರುವುದನ್ನು ಪಕ್ಕಕ್ಕಿಟ್ಟು ನೋಡಿದರೆ, ಎನ್ ಡಿಎ ಮೈತ್ರಿಯ ಮಹತ್ವದ ಪಕ್ಷವಾಗಿರುವ ಎಲ್ ಜೆ ಪಿ ಕೂಟದಿಂದ ಹೊರಬಂದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಮತ್ತೊಂದು ಕಡೆ ಜೆಡಿ(ಯು) ಪಕ್ಷದ ನಿಲುವು, ರಾಜಕೀಯ ಕಾರ್ಯಸೂಚಿಗೆ ಅಸಮಧಾನ ವ್ಯಕ್ತಪಡಿಸಿ ಮೈತ್ರಿ ಕೂಟದಿಂದ ಹೊರಬಂದಿರುವುದಾಗಿ ಎಲ್ ಜೆ ಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಸಮರ್ಥಿಸಿಕೊಂಡಿದ್ದಾರೆ. ಆದರೆ.. ಅವರು ಬಿಜೆಪಿಯೊಂದಿಗೆ ಎಚ್ಚರಿಕೆಯಿಂದ ವ್ಯವಹರಿಸುತ್ತಿದ್ದಾರೆ. ಅನೂಕೂಲವಲ್ಲದ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿರುವ ಬಿಜೆಪಿ ವಿರುದ್ದ ಚಿರಾಗ್ ಪಾಸ್ವಾನ್ ಒಂದು ಮಾತು ಆಡುತ್ತಿಲ್ಲ ಎಂಬುದನ್ನು ಇಲ್ಲಿ ಗಮನಿಸಬಹುದಾಗಿದೆ. ಭವಿಷ್ಯದಲ್ಲಿ ಯಾರೂ ಊಹಿಸದ ರಾಜಕೀಯ ಪರಿಣಾಮ ಉಂಟಾದರೆ ಎಲ್ ಜೆ ಪಿ ಮತ್ತೆ ಬಿಜೆಪಿ ತೆಕ್ಕೆಗೆ ಬರುವ ಅವಕಾಶವಿದೆ ಎಂದು ರಾಜಕೀಯ ನಿಪುಣರು ಹೇಳುತ್ತಿದ್ದಾರೆ.
ಮತ್ತೊಂದು ಕಡೆ ಜೆಡಿ(ಯು) ಕಣಕ್ಕಿಳಿಯುತ್ತಿರುವ 143 ಕ್ಷೇತ್ರಗಳಲ್ಲಿ ಎಲ್ ಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್ ಪಾಸ್ವಾನ್ ಸ್ಪಷ್ಟಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ರಾತ್ರೋ ರಾತ್ರಿ ಆರ್ ಜೆ ಡಿ, ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು, ನಂತರ ಅವರನ್ನು ತೊರೆದು ಬಿಜೆಪಿಯೊಂದಿಗೆ ಮತ್ತೆ ಕೈಜೋಡಿಸಿ ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಆಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈಗಲೂ ಕೂಡ ನಿತೀಶ್ ಆದೇ ತಂತ್ರವನ್ನು ಹೂಡಲಿದ್ದಾರೆ ಎಂಬ ಸುಳಿವು ಗ್ರಹಿಸಿ ಮೈತ್ರಿ ಕೂಟದಿಂದ ಹೊರಬಂದಿದ್ದೇವೆ ಎಂದು ಒಂದು ಆಂಗ್ಲ ಮಾಧ್ಯಮಕ್ಕೆ ಚಿರಾಗ್ ಪಾಸ್ವಾನ್ ತಿಳಿಸಿದ್ದಾರೆ. ಮತ್ತೊಂದು ಕಡೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ ಜೆಪಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಈ ಮೊದಲಿನಿಂದಲೂ ಚಿರಾಗ್ ಪಾಸ್ವಾನ್ ಹೇಳಿಕೊಂಡು ಬರುತ್ತಿದ್ದು, ಬಿಜೆಪಿಯೊಂದಿಗೆ ಮೈತ್ರಿ ಮುಂದವರಿಸುತ್ತೇವೆ ಆದರೆ, ಜೆಡಿ(ಯು)ವಿರುದ್ದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದರು. ಜೆಡಿ(ಯು) ಅನ್ನು ಬಿಹಾರದಲ್ಲಿ ಎಲ್ ಜೆಪಿ ಅಲ್ಲ, ಜನರೇ ಸೋಲಿಸಲಿದ್ದಾರೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೆಡಿಯು ಅಧ್ಯಕ್ಷ ನಿತಿಶ್ ಕುಮಾರ್ ಅವರಿಗೆ ಇಂತಹ ರಾಜಕೀಯ ಹೊಸದೇನು ಅಲ್ಲ. ನಾನು 2013ರಲ್ಲಿ ರಾಜಕೀಯಕ್ಕೆ ಬಂದಾಗಿನಿಂದ ಅವರನ್ನು ವಿರೋಧಿಸುತ್ತಿದ್ದೇನೆ. 2014ರಲ್ಲಿ ಎನ್ ಡಿಎ ತೊರೆದು ಹೋಗಿದ್ದರು. ಮತ್ತೆ ಅಧಿಕಾರಕ್ಕಾಗಿ ವಾಪಸ್ಸಾಗಿದ್ದರು. ಆದರೆ ನಾವು ಮಾತ್ರ ಪ್ರಧಾನಿ ಮೋದಿ ಅವರೊಂದಿಗೆ ಇದ್ದೇವೆ. ಈಗಲೂ ಅದು ಮುಂದುವರಿಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಂಡಿದ್ದೇವೆ. ಮೈತ್ರಿಕೂಟದಲ್ಲಿ ಮುಂದುವರಿಯಬೇಕು ಎಂದು ಬಿಜೆಪಿಯಿಂದ ಯಾವುದೇ ಒತ್ತಡ ಇಲ್ಲ ನಿತಿಶ್ ಜೊತೆ ಕೂಡಿ ಕೆಲಸ ಮಾಡಿದ ಅನುಭವ ತಮಗಿಲ್ಲ, ಆದರೆ ಅವರ ಸಾಧನೆ, ರಾಜಕೀಯ ಕಾರ್ಯಸೂಚಿ ನಮಗೆ ಇಷ್ಟವಾಗುತ್ತಿಲ್ಲ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.