ರೈತರಿಗೆ ಕೋಟ್ಯಂತರ ರೂ. ವಂಚನೆ ಆರೋಪ; ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ
ಧಾರವಾಡ ಜು. 6: ಹುಬ್ಬಳ್ಳಿ ಹಾಗೂ ಕಲಘಟಗಿ ತಾಲ್ಲೂಕಿನ ಕುರಡಿಕೇರಿ, ಕರಡಿಕೊಪ್ಪ, ಸುರಶೆಟ್ಟಿಕೊಪ್ಪ, ಭೂಮ್ಮಸಮುದ್ರ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರಿಗೆ ಮೆಕ್ಕೆಜೋಳ ಖರೀದಿಸಿದ ಹಣ ಪಾವತಿಸದೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಎಐಕೆಎಂಎಸ್ (ಂಋಒಖ) ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರ ಆರೋಪದಂತೆ, ಹುಬ್ಬಳ್ಳಿ ನಿವಾಸಿ ಖಾಜಾಮುದ್ದೀನ್ ರೈತರಿಂದ ಮೆಕ್ಕೆಜೋಳ ಖರೀದಿಸಿ, ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರು. ರೈತರ ಒತ್ತಾಯದ ಬಳಿಕ ಚೆಕ್ಗಳನ್ನು ನೀಡಿದ್ದರೂ, ಅವೆಲ್ಲವೂ ಬೌನ್ಸ್ ಆಗಿವೆ ಎಂದು ದೂರಿದರು.
ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದರೂ ರೈತರಿಗೆ ನ್ಯಾಯ ದೊರೆಯದೇ, ಬಾಕಿ ಹಣವೂ ವಾಪಸ್ ಆಗಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಿ ರೈತರ ಹಣವನ್ನು ವಸೂಲಿ ಮಾಡಿ ಪಾವತಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಎಐಕೆಎಂಎಸ್ ಜಿಲ್ಲಾ ಅಧ್ಯಕ್ಷೆ ದೀಪಾ ಧಾರವಾಡ, ಜಿಲ್ಲಾ ಕಾರ್ಯದರ್ಶಿಗಳಾದ ಶರಣು ಗೋಣವಾರ ಸೇರಿದಂತೆ ರೈತರಾದ ಯಲ್ಲಪ್ಪ ಹುಬ್ಬಳ್ಳಿ, ಗುರುಪಾದಪ್ಪ ಕಾಮಣ್ಣವರ, ನೀಲಪ್ಪ ಜಿನ್ನೂರ, ಚನ್ನಪ್ಪ ಮಲ್ಲಪ್ಪಣ್ಣವರ ಹಾಗೂ ಇತರರು ಭಾಗವಹಿಸಿದ್ದರು.