ಸಾಂಬ್ರಾ ಸಹಕಾರಿ ಸಂಘದಲ್ಲಿ ಒಂದು ಕೋಟಿ ತೊಂಬತ್ತಾರು ಲಕ್ಷ ರೂ ವಂಚನೆ ಆರೋಪ
ಲೋಕದರ್ಶನ ವರದಿ
ಬೆಳಗಾವಿ 01 : ತಾಲೂಕಿನ ಸಾಂಬ್ರಾ ಗ್ರಾಮದ ಯಶವಂತ ಮಲ್ಟಿಪರ್ಪಸ ಕೋ-ಆಪರೇಟಿವ್ ಸೊಸೈಟಿಯಲ್ಲಿ 1.96 ಕೋಟಿ ಹಣದ ವಂಚನೆ ನಡೆದಿರುವ ಆರೋಪದ ಹಿನ್ನೆಲೆಯಲ್ಲಿ ಸಂಘದ ಮಾಜಿ ಕಾರ್ಯದರ್ಶಿ ಭುಜಂಗ ಕೇದಾರಿ ಜೋಯಿ ವಿರುದ್ಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೊಸೈಟಿ ಅಧ್ಯಕ್ಷ ದೀಲೀಪಕುಮಾರ್ ಚವ್ಹಾಣ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. ದೂರಿನ ಪ್ರಕಾರ, ಭುಜಂಗ ಜೋಯಿ ಅವರು 2002-03ರಿಂದ 2023ರವರೆಗೆ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲಿ ಸದಸ್ಯರ ಸಾಲದ ದಾಖಲೆಗಳನ್ನು ದುರ್ಬಳಕೆ ಮಾಡಿಕೊಂಡು, ಅಧ್ಯಕ್ಷರ ಸಹಿಯನ್ನು ನಕಲಿ ಮಾಡಿ ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಾಲದ ಹಣವನ್ನು ಸಂಘದ ಖಾತೆಗೆ ಜಮಾ ಮಾಡದೆ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವುದು, ಸದಸ್ಯರಿಂದ ಸಂಗ್ರಹಿಸಿದ ಸಾಲದ ಕಂತಿನ ಹಣವನ್ನು ಸಂಘದ ಖಾತೆಗೆ ಪಾವತಿಸದೆ ದುರ್ಬಳಕೆ ಮಾಡಿಕೊಂಡಿರುವುದೂ ಸೇರಿದಂತೆ ಹಲವು ಆರೋಪಗಳು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಾಲ್ವರು ಷೇರುದಾರರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದಿರುವುದು ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಸಾಲ ಮಂಜೂರು ಮಾಡಿಸಿಕೊಂಡು ಹಣ ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ. ಈ ಅಕ್ರಮಗಳಿಂದ ಒಟ್ಟು 1,96,31,966 ಹಣವನ್ನು ವಂಚಿಸಿ ಸಂಘಕ್ಕೆ ನಷ್ಟ ಉಂಟು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.