ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ನನ್ನ ಮುಖ್ಯ ಗುರಿ : ನಡಹಳ್ಳಿ
ತಾಳಿಕೋಟಿ: ಟೀಕಿಸುವವರಿಗೆ ಉತ್ತರ ಕೊಡುವುದಕ್ಕಾಗಿ ಜನ ನನ್ನನ್ನು ಆಯ್ಕೆ ಮಾಡಿಲ್ಲ. ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಮಾಡುವದಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಕೇವಲ ಹೊಟ್ಟೆಕಿಚ್ಚಿನಿಂದ ಟೀಕಿಸುವವರಿಗೆ ನನ್ನ ಕೆಲಸಗಳೇ ಉತ್ತರ ಕೊಡುತ್ತವೆ. ನನ್ನನ್ನು ನಂಬಿ ಆರಿಸಿ ತಂದ ಜನರ ಬದುಕು ಕಟ್ಟಿ ಕೊಡುವುದೇ ನನ್ನ ಸಂಕಲ್ಪವಾಗಿದೆ ಎಂದು ಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಹೇಳಿದರು.
ಮತಕ್ಷೇತ್ರದ ಕವಡಿಮಟ್ಟಿ ಗ್ರಾಮದಲ್ಲಿ ರೂ. 88 ಲಕ್ಷ ಮೊತ್ತದ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ನಂತರ ಗ್ರಾಮಸ್ಥರು ನೀಡಿದ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡಿದರು.
ನಾನು ಹುಟ್ಟಿ ಬೆಳೆದ ನನ್ನ ಈ ತಾಲೂಕಿನ ಜನರ ಸೇವೆ ಮಾಡಬೇಕೆಂದು ಬಯಸಿ ದೇವರ ಹಿಪ್ಪರಗಿ ಕ್ಷೇತ್ರವನ್ನು ಬಿಟ್ಟು ಇಲ್ಲಿಗೆ ಬಂದಿದ್ದೇನೆ. ನನ್ನ ಕ್ಷೇತ್ರದ ಜನರ ಬದುಕು ಕಟ್ಟಿಕೊಡುವುದು ನನ್ನ ಮುಖ್ಯ ಗುರಿ. ನನ್ನ ಕೆಲಸ ನಾನು ಮಾಡುತ್ತಾ ಹೋಗುತ್ತೇನೆ. ನನ್ನ ಕೆಲಸಗಳೇ ಎಲ್ಲ ಪ್ರಶ್ನೆಗಳಿಗೂ ಉತ್ತರವಾಗಬೇಕು. ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇನೆ. ನನ್ನ ಕೆಲಸ ನೋಡಿ ಜನರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. 25 ವರ್ಷಗಳ ಸುದೀರ್ಘ ಅವಧಿಯಲ್ಲಿ ಏನನ್ನೂ ಮಾಡದವರು ಈಗ ಇದು ನನ್ನ ಕೊನೆಯ ಚುನಾವಣೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ.
ನೀವು ಅಧಿಕಾರಕ್ಕಾಗಿ ಆಯ್ಕೆ ಬಯಸುತ್ತೀರಿ ನಾನು ಜನರ ಸೇವೆಗಾಗಿ ಆಯ್ಕೆಯಾಗ ಬಯಸುತ್ತೇನೆ. ನಾನು ಯಾವುತ್ತೂ ಜಾತಿ, ಧರ್ಮ, ಮತ, ಪಂಥಗಳ ಭೇದ-ಭಾವ ಮಾಡಿಲ್ಲ. ಎಲ್ಲರನ್ನೂ ನಾನು ಸಮಾನವಾಗಿ ಕಾಣುತ್ತೇನೆ. ಎಲ್ಲರ ಏಳಿಗೆಯೇ ನನಗೆ ಮುಖ್ಯ. ಮುಂದಿನ ಹತ್ತು ವರ್ಷಗಳಲ್ಲಿ ಈ ತಾಲೂಕಾ ಅತ್ಯಂತ ಶ್ರೀಮಂತ ತಾಲೂಕಾಗಲಿದೆ. ಶೇ 100 ರ ಪೈಕಿ ಶೇ. 70 ರಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದೇನೆ. ನಿಮ್ಮೆಲ್ಲರ ಸಹಕಾರ ನನಗೆ ಮತ್ತೇ ಬೇಕು ಎಂದರು.
ಈ ಸಮಯದಲ್ಲಿ ಡಿಸಿಸಿ ಬ್ಯಾಂಕ ನಿರ್ದೇಶಕ ಸೋಮನಗೌಡ ಬಿರಾದಾರ, ಬಿಜೆಪಿ ಓಬಿಸಿ ಮೊರ್ಚಾದ ಅಧ್ಯಕ್ಷ ಲಕ್ಷ್ಮಣ ಬಿಜ್ಜೂರ, ಬಸವರಾಜ ಗುಳಬಾಳ, ಇಂಜಿನಿಯರ್ ಬಸವಂತ್ರಾಯ ಪಾಟೀಲ, ಬಸವರಾಜ ಸರೂರ, ಬಸಲಿಂಗಪ್ಪ ಮೇಟಿ, ಬಸವರಾಜ ಹೊಕ್ರಾಣಿ, ಮಲ್ಲಯ್ಯ ಹಿರೇಮಠ. ಮಾಳಪ್ಪ ಬಳಬಟ್ಟಿ, ಹಣಮಂತ ಹಂಡರಗಲ್ಲ, ಮತ್ತಿತರರು ಇದ್ದರು.