ಗೃಹಲಕ್ಷ್ಮಿ ಯೋಜನೆ ಅನುಷ್ಟಾನಗೊಳಿಸಲು ಸಕಲ ಸಿದ್ದತೆ: ಸಂತೋಷ ಹಿರೇಮಠ
ಲೋಕದರ್ಶನ ವರದಿ
ಶಿಗ್ಗಾವಿ : ರಾಜ್ಯ ಸರಕಾರದಿಂದ ಮಹಿಳೆಯರ ಆರ್ಥಿಕ ಸಬಲೀಕರಣ ಹೆಚ್ಚಿಸುವ ಸಲುವಾಗಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ನೀಡುವ 2000 ರೂಗಳ ಗೃಹಲಕ್ಷ್ಮಿ ಯೋಜನೆಯು ಇದೇ ಆ. 30 ರಂದು ರಾಜ್ಯಾದ್ಯಂತ ಚಾಲನೆ ನೀಡಲಾಗುತ್ತಿದ್ದು ಶಿಗ್ಗಾವಿ ಪಟ್ಟಣದ ಹಾಗೂ ತಾಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ತಹಶೀಲ್ದಾರ ಸಂತೋಷ ಹಿರೇಮಠ ತಿಳಿಸಿದರು.
ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಅನುಷ್ಠಾನದ ಕುರಿತು ನಡೆದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಯೋಜನೆಗೆ ನೊಂದಣಿಯಾದ ಪಲಾನುಭವಿಗಳ ಖಾತೆಗೆ 2000 ರೂಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡುವ ನಗದು ಸೌಲಭ್ಯವನ್ನು ನೀಡುವ ಕಾರ್ಯಕ್ರಮವನ್ನು ಆ.30ರ ಮಧ್ಯಾಹ್ನ 12 ಗಂಟೆಗೆ ಸಿಎಂ ಸಿದ್ದರಾಮಯ್ಯನವರು, ಡಿಸಿಎಂ ಡಿ ಕೆ ಶಿವಕುಮಾರ ರವರು, ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರವರಿಂದ ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಅದೇ ರೀತಿ ಶಿಗ್ಗಾವಿ ತಾಲೂಕಿನಲ್ಲಿ ಅಂದು ಶಿಗ್ಗಾವಿ ಪುರಸಭೆ ವ್ಯಾಪ್ತಿಯಲ್ಲಿ 03, ಬಂಕಾಪೂರ ಪುರಸಭೆ ವ್ಯಾಪ್ತಿಯಲ್ಲಿ 3, ತಾಲ್ಲೂಕಿನ 28 ಗ್ರಾಮ ಪಂಚಾಯತಿಗಳಲ್ಲಿ ನೇರ ಪ್ರಸಾರದ ಕೇಂದ್ರಗಳೆಂದು ಗುರುತಿಸಲಾಗಿದ್ದು ಪ್ರತಿ ನೇರ ಪ್ರಸಾರ ಕೇಂದ್ರಗಳಿಗೆ ಪ್ರತಿಯೊಬ್ಬ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ, ಕಾರ್ಯಕ್ರಮದ ಸ್ಥಳದಲ್ಲಿ ಒಂದು ಟಿ ವಿ ಪ್ರೊಜೆಕ್ಟರ ಎಲ್ಇಡಿ ಪರದೆಯನ್ನು ವ್ಯವಸ್ಥೆಗೊಳಿಸುವುದು, ಟಿವಿಯಲ್ಲಿ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದ ನೇರ ಪ್ರಸಾರವನ್ನು ಪ್ರದರ್ಶಿಸುವುದು, ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಯೋಜನೆಯ ಫಲಾನುಭವಿಗಳು, ಸಾರ್ವಜನಿಕರು, ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂಬ ಉದ್ದೇಶವನ್ನ ಹೊಂದಲಾಗಿದೆ ಎಂದರು.
ಪುರಸಭೆ ವ್ಯಾಪ್ತಿಗಳಲ್ಲಿ ನೇರ ಪ್ರಸಾರದ ಕೇಂದ್ರಗಳು :
ಶಿಗ್ಗಾವಿ ಪಟ್ಟಣದ ಅಂಬೇಡ್ಕರ ಓಣಿಯ ಮಿನಿ ಅಂಬೇಡ್ಕರ ಭವನದಲ್ಲಿ, ಶಿಗ್ಗಾವಿ ಪುರಸಭೆ ಆವರಣದಲ್ಲಿ, ಸವಣೂರ ರಸ್ತೆಯಲ್ಲಿಯ ಶಾಧಿ ಮಹಲ್ನಲ್ಲಿ ನೇರ ಪ್ರಸಾರದ ಕೇಂದ್ರಗಳೆಂದು ಗುರುತಿಸಲಾಗಿದೆ.
ಬಂಕಾಪುರ ಪುರಸಭೆ ವ್ಯಾಪ್ತಿಯಲ್ಲಿ ನೇರ ಪ್ರಸಾರದ ಕೇಂದ್ರಗಳು :
ಬಂಕಾಪುರಲ್ಲಿ ಪಕ್ಕೀರ ಸಿದ್ದರಾಮ ಸಭಾ ಭವನದಲ್ಲಿ, ಚಾಮುಂಡೆಶ್ವರಿ ನಗರದ ವಿಠಲ ರುಕ್ಮಿಣಿ ಕಲ್ಯಾಣ ಮಂಟಪಲ್ಲಿ, ಕೊಟ್ಟಿಗೇರಿಯ ಉಡಚಮ್ಮದೇವಿ ಸಭಾ ಮಂಟಪದಲ್ಲಿ ಆಯೋಜಿಸಲಾಗಿದೆ ಜೊತೆಗೆ ಗ್ರಾಮೀಣ ಭಾಗದಲ್ಲಿಯ 28 ಗ್ರಾಮ ಪಂಚಾಯತಗಳು ನೇರ ಪ್ರಸಾರದ ಕೇಂದ್ರಗಳೆಂದು ಗುರುತಿಸಲಾಗಿದೆ ಎಂದು ತಹಶೀಲ್ದಾರರು ತಿಳಿಸಿದರು.
ತಾಪಂ ಕಾರ್ಯನಿರ್ವಾಹಕಾಧಿಕಾರಿ ಪಿ ವಿಶ್ವನಾಥ, ಶಿಗ್ಗಾವಿ ಪುರಸಭೆಯ ಮುಖ್ಯಾಧಿಕಾರಿ ಸಂಗನಬಸಯ್ಯ, ಸಿಡಿಪಿಓ ಗಣೇಶ ಲಿಂಗನಗೌಡರ, ಪಿಡಿಓ ಭೂಸರೆಡ್ಡಿ ಸೇರಿದಂತೆ ಸಿಬ್ಬಂದಿಗಳು ಇದ್ದರು.