ರಾಷ್ಟ್ರೀಯ

ಹತ್ರಾಸ್‍ ಪ್ರಕರಣ: ಉತ್ತರಪ್ರದೇಶ ಸರ್ಕಾರದಿಂದ ಎಲ್ಲಾ ಎಫ್‌ಐಆರ್‌ಗಳು ಸಿಬಿಐಗೆ ಹಸ್ತಾಂತರ

ಹತ್ರಾಸ್‍ ಪ್ರಕರಣ: ಉತ್ತರಪ್ರದೇಶ ಸರ್ಕಾರದಿಂದ ಎಲ್ಲಾ ಎಫ್‌ಐಆರ್‌ಗಳು ಸಿಬಿಐಗೆ ಹಸ್ತಾಂತರ

ಲಕ್ನೋ / ಹತ್ರಾಸ್, ಅಕ್ಟೋಬರ್ 7 : ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಉತ್ತರ ಪ್ರದೇಶ ಸರ್ಕಾರ ಬುಧವಾರ ಸಿಬಿಐಗೆ ಹಸ್ತಾಂತರಿಸಿದೆ.

 ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಎಫ್‌ಐಆರ್‌ಗಳನ್ನು ಸಿಬಿಐಗೆ ವರ್ಗಾಯಿಸಲಾಗಿದೆ ಎಂದು ಇಲ್ಲಿ ಅಧಿಕೃತ ಮೂಲಗಳು ತಿಳಿಸಿವೆ.

 ಕಳೆದ ಶನಿವಾರ ಉತ್ತರಪ್ರದೇಶ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿತ್ತು. ತಕ್ಷಣವೇ ಈ ಕುರಿತು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರವನ್ನು ಕಳುಹಿಸಿತ್ತು.

 ಈ ವಿಷಯ ಸುಪ್ರೀಂ ಕೋರ್ಟ್‌ನ ಮುಂದೆ ವಿಚಾರಣೆಗೆ ಬಂದ ನಂತರ ಮಂಗಳವಾರ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದೆ. ಸಿಬಿಐ ತನಿಖೆಯನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡಬಹುದೆಂದು ಉತ್ತರಪ್ರದೇಶ ಸರ್ಕಾರ ಸಲಹೆ ಮಾಡಿದೆ.

 ಆದರೆ ಮತ್ತೊಂದೆಡೆ, ಸಂತ್ರಸ್ತೆಯ ಕುಟುಂಬ ಸಿಬಿಐ ತನಿಖೆಯನ್ನು ವಿರೋಧಿಸಿದೆ. ಸಂತ್ರಸ್ತೆ ಕುಟುಂಬದವರ, ಆರೋಪಿಗಳ ಮತ್ತು ಪೊಲೀಸರ ಮಂಪರು ಪರೀಕ್ಷೆಗೆ ಉತ್ತರಪ್ರದೇಶ ಸರ್ಕಾರವು ನೀಡಿದ ಸಲಹೆಯನ್ನು ವಿರೋಧಿಸಿ ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.

 ಈ ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದ್ದರೂ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸುತ್ತಿದೆ. ಸದ್ಯ ಸರ್ಕಾರ ಎಸ್‍ಐಟಿ ಅವಧಿಯನ್ನು ಇನ್ನೂ ಹತ್ತು ದಿನಗಳವರೆಗೆ ವಿಸ್ತರಿಸಿದೆ. ವರದಿಯನ್ನು ಸಲ್ಲಿಸಲು ಒಂದು ವಾರದೊಳಗೆ ಸಲ್ಲಿಸಲು ಸೆ 30ರಂದು ರಚಿಸಲಾದ ಎಸ್‍ಐಟಿಗೆ ಕಾಲಾವಕಾಶ ನೀಡಿದೆ. 

 ಗೃಹ ಕಾರ್ಯದರ್ಶಿ ಭಗವಾನ್ ಸ್ವರೂಪ್ ನೇತೃತ್ವದ ಎಸ್‍ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು,  ಇದರ ಆಧಾರದಡಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಸೇರಿದಂತೆ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. 

 ಎಸ್ಐಟಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿದ್ದು, ಸಂತ್ರಸ್ತೆಯ ಕುಟುಂಬದವರು, ಪೊಲೀಸರು ಮತ್ತು ಆರೋಪಿಗಳ ಕುಟುಂಬದವರ ಹೇಳಿಕೆಗಳನ್ನು ದಾಖಲಿಸಿದೆ. ನಾಲ್ವರು ಆರೋಪಿಗಳನ್ನು ಸಹ ಅಲಿಘರ್ ಜೈಲಿನಲ್ಲಿ ವಿಚಾರಣೆ ನಡೆಸಲಾಗಿದೆ.

 ಈ ಪ್ರಕರಣದ ವಿಚಾರಣೆಯನ್ನು ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆಗೆ ಆದಿತ್ಯನಾಥ್ ಈಗಾಗಲೇ ಸೂಚಿಸಿದ್ದಾರೆ.

ಸುದ್ದಿ ಓದಿ