ಅಮಿತ್ ಶಾ ಆನಾರೋಗ್ಯ: ಏಮ್ಸ್ ಹೇಳಿಕೆ ಬಿಡುಗಡೆ
ನವದೆಹಲಿ, ಸೆಪ್ಟೆಂಬರ್ 13: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆನಾರೋಗ್ಯ ಸಂಬಂಧ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಭಾನುವಾರ ಹೇಳಿಕೆ ಬಿಡುಗಡೆ ಮಾಡಿದೆ.
ಅನಾರೋಗ್ಯ ಕಾರಣ ಅಮಿತ್ ಶಾ ಅವರು ಶನಿವಾರ ರಾತ್ರಿ 11 ಗಂಟೆಗೆ ಏಮ್ಸ್ ಗೆ ದಾಖಲಾಗಿದ್ದಾರೆ. ಅವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಉಸಿರಾಟ ನಡೆಸಲು ಸಮಸ್ಯೆ ಎದುರಾದ ತಕ್ಷಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅವರ ಆರೋಗ್ಯ ಕುರಿತು ದೇಶಾದ್ಯಂತ ಕಳವಳ ವ್ಯಕ್ತಗೊಂಡಿರುವ ಹಿನ್ನೆಲೆಯಲ್ಲಿ ಏಮ್ಸ್ ಹೇಳಿಕೆ ಬಿಡುಗಡೆ ಮಾಡಿದೆ.
ಸಂಸತ್ತಿನ ಮುಂಗಾರು ಅಧಿವೇಶನ ನಾಳೆಯಿಂದ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಅಮಿತ್ ಶಾ ಅವರು ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗುತ್ತಿದ್ದಾರೆ ಎಂದು ಏಮ್ಸ್ ವೈದ್ಯರು ತಿಳಿಸಿದ್ದಾರೆ.
ಈ ಸಂಬಂಧ ಏಮ್ಸ್ ನ ಮಾಧ್ಯಮ ಹಾಗೂ ಪ್ರೊಟೊಕಾಲ್ ವಿಭಾಗದ ಮುಖ್ಯಸ್ಥೆ ಡಾ. ಆರ್ತಿ ವಿಜ್ ಹೇಳಿಕೆ ನೀಡಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡು ಮೆದಾಂತ ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಆಯಾಸ, ಮೈ ನೋವು ಹಿನ್ನೆಲೆಯಲ್ಲಿ ಕಳೆದ ಆಗಸ್ಟ್ 18ರಂದು ಏಮ್ಸ್ ಗೆ ದಾಖಲಾಗಿದ್ದರು. 13 ದಿನಗಳ ಚಿಕಿತ್ಸೆಯ ನಂತರ ಆಗಸ್ಟ್ 30 ರಂದು ಅವರನ್ನು ಏಮ್ಸ್ ನಿಂದ ಬಿಡುಗಡೆ ಮಾಡಲಾಗಿತ್ತು.
ಎರಡು ವಾರಗಳ ನಂತರ ಮತ್ತೆ ಪರೀಕ್ಷೆಗಳಿಗೆ ಅಸ್ಪತ್ರೆಗೆ ಬರುವಂತೆ ಸೂಚನೆ ನೀಡಲಾಗಿತ್ತು. ಅದರಂತೆ ಅಮಿತ್ ಷಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಂದೆರಡು ದಿನಗಳಲ್ಲಿ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಆರ್ತಿ ವಿಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.