ಸಹಕಾರಿ ಕ್ಷೇತ್ರದಲ್ಲಿಯೂ ಮಹಿಳೆಯರ ಸಾಧನೆ
ತಾಳಿಕೋಟೆ 02: ಸಹಕಾರಿ ತತ್ವ ಸಾರಿದ ಗದಗಿನ ಸಿದ್ಧನಗೌಡ ಪಾಟೀಲರ ತತ್ವದಂತೆ ಮುನ್ನಡೆದಿರುವ ಸ್ಥಳೀಯ ಶಾರದಾದೇವಿ ಮಹಿಳಾ ಕೋ ಆಫ್ ಪಟ್ಟಣದ ಮಹಿಳೆಯರಲ್ಲಿ ಹೊಸ ಬೆಳಕು ಭರವಸೆಯನ್ನು ತುಂಬಿದೆ ಎಂದು ತಾಳಿಕೋಟಿ ಸಹಕಾರಿ ಬ್ಯಾಂಕಿನ ಪ್ರಭಾರ ಪ್ರಧಾನ ವ್ಯವಸ್ಥಾಪಕಿ ಬಿ.ಕೆ.ಮಣ್ಣೂರ ಹೇಳಿದರು .
ಪಟ್ಟಣದ ಎಪಿಎಂ.ಸಿ ಸಭಾಭವನದಲ್ಲಿ ಶಾರದಾದೇವಿ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಲಿ.ನ 25ನೇಯ ವರ್ಷದ ಪ್ರಯಕ್ತ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು.
ಐದು ದಶಕಗಳ ಹಿಂದೆಯೇ ಶಿಶು ವಿಹಾರ ಆರಂಭಿಸಿ, ಮಹಿಳೆಯರ ಆರ್ಥಿಕ ಸಬಲತೆಗೆ ಹೊಲಿಗೆ ವರ್ಗ ನಡೆಸುತ್ತ, 1996ರಲ್ಲಿ ಮಹಿಳಾ ಸೊಸಾಯಿಟಿಯನ್ನೂ ಕಟ್ಟಿ ಬೆಳೆಸಿದವರು ಶಾಂತಾಬಾಯಿ ನೂಲಿಕರ ತಾಯಿಯವರು, ಅವರಿಗೆ ಜೊತೆಯಾಗಿ ಹೆಗಲು ಕೊಟ್ಟವರು ಹಿರಿಯರಾದ ಶಿವಲಿಂಗಮ್ಮ ಬಳಗಾನೂರ, ಅನಸೂಯಾ ದೇಶಪಾಂಡೆ ತಾಯಿಯವರು ಅವರಿಂದಾಗಿ ಪಟ್ಟಣದ ಮೊದಲ ಮಹಿಳಾ ಸೊಸಾಯಿಟಿ ರಜತ ಮಹೋತ್ಸವ ಆಚರಿಸುತ್ತಿದೆ ಎನ್ನುವುದೇ ಹೆಮ್ಮೆಯ ಸಂಗತಿಯಾಗಿದೆ. ವಿಶ್ವಾಸ ಹೋಗದಂತೆ ಸೊಸಾಯಿಟಿಯ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಗ್ರಾಹಕರು ಪರಸ್ಪರ ಒಂದಾಗಿ ಹೋಗಬೇಕು ಸಹಕಾರಿಗಳಲ್ಲಿ ಶಿಸ್ತು ಬದ್ಧತೆ ಬೇಕು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಸಾಧನೆ ಮಾಡುತ್ತಿದ್ದಾರೆ ಅದಕ್ಕೆ ಸಾಕ್ಷಿಯಾಗಿ ಸೊಸಾಯಿಟಿ ಬೆಳೆದಿದೆ ಎಂದರು.
ಸಾಹಿತಿ ಅಶೋಕ ಹಂಚಲಿ ಮಾತನಾಡಿ, ದೇಶದ ಪ್ರತಿ ಹೆಣ್ಣುಮಕ್ಕಳಲ್ಲಿ ಪ್ರತಿಭೆ ಇದೆ ಎಂದು ಸಾರುವಂತೆ ಶಾರದಾ ಮಹಿಳಾ ಸೊಸಾಯಿಟಿ ಬೆಳೆದು ನಿಂತಿದೆ. ಬಡಮಹಿಳೆಯರಿಗೆ ಆರ್ಥಿಕ ನೆರವು ನೀಡಿ ಅವರ ಕುಟುಂಬದಲ್ಲಿ ಸಂತಸ ಅರಳುವಂತೆ ಮಾಡಿದ್ದಾರೆ. ಇದಕ್ಕೆ ಕಾರಣರಾಧ ಸಕಲರನ್ನು ಅಭಿನಂದಿಸುವೆ. 912 ಸದಸ್ಯರನ್ನು ಹೊಂದಿದೆ. 31.38 ಲಕ್ಷ ಷೇರು ಬಂಡವಾಳ ಹೊಂದಿದೆ. ಮೂರು ಕೋಟಿ ಹಣ ದುಡಿಯುವ ಬಂಡವಾಳ ಹೊಂದಿದ ಬ್ಯಾಂಕ ಇದಾಗಿದೆ ಎಂದರು.
ಸಾನ್ನಿಧ್ಯವನ್ನು ಖಾಸ್ಗತೇಶ್ವರಮಠದ ಮುರುಘೇಶ ವಿರಕ್ತಮಠ ವಹಿಸಿದ್ದರು. ವಿಜಯಪುರ ಸಹಕಾರಿ ಸಂಘಗಳ ಉಪನಿಬಂಧಕ ಎಸ್.ಜಿ.ಕುಂಬಾರ, ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಶಾರದಾದೇವಿ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಸಂಸ್ಥಾಪಕ ಅಧ್ಯಕ್ಷೆ ಶಾಂತಾಬಾಯಿ ನೂಲೀಕರ, ಬಸವರಾಜ ಯಡ್ರಾಮಿ, ಉಮಾ ಸಾಲಂಕಿ ಮಾತನಾಡಿದರು.
ವೇದಿಕೆಯಲ್ಲಿ ತಾಳಿಕೋಟಿ ಸಹಕಾರಿ ಬ್ಯಾಂಕಿನ ಅಧ್ಯಕ್ಷ, ಸಹಕಾರ ರತ್ನ ಪುರಸ್ಕೃತ ವಿಠ್ಠಲಸಿಂಗ ಹಜೇರಿ ಶ್ರೀ ಶಾರದಾದೇವಿ ಮಹಿಳಾ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ಉಪಾಧ್ಯಕ್ಷೆ ಶಿವಲಿಂಗಮ್ಮ ಬಳಗಾನೂರ, ನಿರ್ದೇಶಕಿಯರಾದ ಅನಸೂಯಾ ದೇಶಪಾಂಡೆ, ಸುರೇಖಾ ಸಾಲಂಕಿ, ಮೀನಾಕ್ಷಿ ಪಾಟೀಲ, ಸುಮಂಗಲಾ ಕಲಬುರ್ಗಿ, ಶೋಭಾ ಕಟ್ಟಿಮನಿ, ಶಂಕ್ರಮ್ಮ ತೋಟದ, ಸಿಬ್ಬಂದಿಗಳಾದ ಗೀತಾ ಶರಣರ, ಆಶಾಲತಾ ಅಲ್ಲಾಪುರ, ಭಾರತಿ ಕಲಬುರ್ಗಿ, ಇದ್ದರು. ಸುಚಿತಾ ಮುಡುಗೆರೆ ಭರತನಾಟ್ಯ ಪ್ರದರ್ಶನ ನೀಡಿದರು. ಜಯಶ್ರೀ ಸಜ್ಜನ ಪ್ರಾರ್ಥಿಸಿದರು. ಸೀಮಾ ಚವ್ಹಾನ ಸ್ವಾಗತಿಸಿದರು. ರೇಣುಕಾ ಕಾರಜೋಳ, ಸುರೇಖಾ ಬಿಳೇಭಾವಿ ನಿರೂಪಿಸಿದರು. ಲತಾ ಪ್ರಥಮಶೆಟ್ಟಿ ವಂದಿಸಿದರು.