ಬೆಂಗಳೂರಿನಲ್ಲಿ ಸೆ. 2ರಿಂದ ಎಐಯುಟಿಯುಸಿ ಅಹೋರಾತ್ರಿ ಧರಣಿ
ಲೋಕದರ್ಶನ ವರದಿ
ಬೆಳಗಾವಿ 29: ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವಂತೆ ಆಗ್ರಹಿಸಿ ಎಐಯುಟಿಯುಸಿ ಕರ್ನಾಟಕ ರಾಜ್ಯ ಸಮಿತಿ ನೇತೃತ್ವದಲ್ಲಿ ಸೆಪ್ಟೆಂಬರ್ 2ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಬೃಹತ್ ಅಹೋರಾತ್ರಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ. 2026ರ ಮೇ 22ರಂದು ಹೊರಡಿಸಲಾದ 81 ನಿಗದಿತ ಉದ್ಯೋಗಗಳ ಪರಿಷ್ಕೃತ ಕನಿಷ್ಠ ವೇತನ ಅಧಿಸೂಚನೆಯ ಜಾರಿಗೆ ತಡೆ ನೀಡಿರುವ ಸರ್ಕಾರದ ಕ್ರಮವನ್ನು ಸಂಘಟನೆ ಖಂಡಿಸಿದೆ. ಪರಿಷ್ಕೃತ ವೇತನವನ್ನು ಕೂಡಲೇ ಜಾರಿಗೊಳಿಸುವುದು, ವೇತನ ಜಾರಿಗೆ ತಡೆಹಿಡಿಯಲು ರಚಿಸಿರುವ ಸಚಿವ ಸಂಪುಟ ಸಮಿತಿಯನ್ನು ರದ್ದುಪಡಿಸುವುದು ಹಾಗೂ ಬಾಕಿ ವೇತನ ವ್ಯತ್ಯಾಸವನ್ನು ಕಾರ್ಮಿಕರಿಗೆ ಪಾವತಿಸುವಂತೆ ಆಗ್ರಹಿಸಿದೆ. ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ ಮೇಟಿ ತಿಳಿಸಿದ್ದಾರೆ.