ಸುಣಕಲ್ಲಬಿದರಿ ಸಂ.ಪ.ಪೂ ಕಾಲೇಜಿನಲ್ಲಿ ಏಡ್ಸ್ ಜಾಗೃತಿ ದಿನಾಚರಣೆ
ಲೋಕದರ್ಶನ ವರದಿ
ರಾಣೇಬೆನ್ನೂರು 10: ಏಡ್ಸ್ ಕಾಯಿಲೆ ಹೆಚ್ಚಾಗಲು ಜಾಗ್ರತೆ ಇಲ್ಲದಿರುವುದು ಮುಖ್ಯಕಾರಣವಾಗಿದ್ದು ಇದರ ಬಗ್ಗೆ ಎಲ್ಲರೂ ಎಚ್ಚೆತ್ತುಕೊಂಡಾಗ ಮಾತ್ರ ಸೋಂಕಿನಿಂದ ಹೂರ ಬರಲು ಸಾಧ್ಯವಾಗುವುದು ಎಂದು ಸುಣಕಲ್ಲಬಿದರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಉದಯಕುಮಾರ.ಎನ್.ಆರ್. ಹೇಳಿದರು.
ಅವರು ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಶ್ರೀ ಸದ್ಗುರು ಶಿವಾನಂದ ಸಂಯುಕ್ತ ಪ ಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ,ರೆಡ್ ರಿಬ್ಬನ್ ಕ್ಲಬ್ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವು ಸಸಿಗೆ ನೀರು ಊಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ನೆಮ್ಮದಿಯಿಂದ ಜೀವನ ನೆಡೆಸಬೇಕು ಏಡ್ಸ್ ಮಾರಕ ರೋಗವಾಗಿದ್ದು, ಇದು ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುತ್ತದೆ ಇದನ್ನು ತಡೆಗಟ್ಟಲು ಜನರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದರು.
ಪ್ರಾಸ್ತವಿಕವಾಗಿ ಮಾತನಾಡಿದ ಶಿವಾನಂದ ಹೆಚ್ ಅವರು ವಿಶ್ವ ಆರೋಗ್ಯ ಸಂಸ್ಥೆಯವರು 1988 ರಿಂದ ಪ್ರತಿ ವರ್ಷವು ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನಾಚರಣೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸುತ್ತಾರೆ. ಸೋಂಕಿತ ಜನರಲ್ಲಿ ಮಾನಸಿಕ ಧೈರ್ಯ ತುಂಬುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಆರೋಗ್ಯ ನಿರಿಕ್ಷಣಾಧಿಕಾರಿ ತಿಪ್ಪೇಸ್ವಾಮಿ.ಎ.ಆರ್. ಅವರು ಮಾತನಾಡಿ ಈ ವರ್ಷದ ಘೋಷ ವ್ಯಾಕ್ಯ ಅಸಮಾನತೆಗಳನ್ನು ಕೊನೆಗೊಳಿಸಿ ಏಡ್ಸ್ನ್ನು ಕೊನೆಗೊಳಿಸಿ ಎಂಬುದಾಗಿದೆ. ಹಾವೇರಿ ಜಿಲ್ಲೆಯಲ್ಲಿ 2008ರಿಂದ 31-10-2021ರವರೆಗೆ ಹಾವೇರಿ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 7895ಗಳಿದ್ದು ಇದರಲ್ಲಿ ಪುರುಷರು 3607 ಮತ್ತು ಸ್ತ್ರೀಯರು 3778 ಇದ್ದಾರೆ ಏಡ್ಸ್ ಕಾಯಿಲೆ ಮಾನವ ಜಗತ್ತಿಗೆ ಮಾರಕವಾಗಿದೆ ಎಂದರು.
ಕಾಲೇಜು ಪ್ರಾಚಾರ್ಯ ಪಿ.ಮುನಿಯಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪನ್ಯಾಸಕರಾದ ಮಹೇಶ.ಟಿ, ವಿನಾಯಕ ಬೇನಕನಕೊಂಡ, ಶಶಿಕುಮಾರ ಕುರುಬರ, ಅಶೋಕ ಎಲ್,ಆರ್.ಪ್ರವೀಣ್ಕುಮಾರ್.ಜಗದೀಶ.ಕೆ ಸೇರಿದಂತೆ ಮತ್ತಿತರ ಉಪನ್ಯಾಸಕರು ಶಿಕ್ಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು.