ವಿಜ್ಞಾನವನ್ನು ಜನಪ್ರಿಯಗೊಳಿಸುವುದೇ ಜನವಿಜ್ಞಾನ ಚಳುವಳಿಯ ಮುಖ್ಯ ಉದ್ಧೇಶ
ಬೈಲಹೊಂಗಲ 26: ಶಿಕ್ಷಕರಲ್ಲಿ ಸಂಶೋಧನಾ ಮನೋಭಾವನೆ ಬೆಳೆಸುವ ಮೂಲಕ ಸಮಾಜದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವುದೆ ಜನವಿಜ್ಞಾನ ಚಳುವಳಿಯ ಮುಖ್ಯ ಉದ್ಧೇಶವಾಗಿದೆ ಎಂದು ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ.ವೀರಣ್ಣ ಬೋಳಿಶೆಟ್ಟಿ ಹೇಳಿದರು.
ಸಮೀಪದ ಕ್ಷೇತ್ರ ಸೊಗಲದಲ್ಲಿ ನಡೆದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಇವರ ಸಹಯೋಗದಲ್ಲಿ ರಾಜ್ಯ ಮಟ್ಟದ ಜನವಿಜ್ಞಾನ ಚಳುವಳಿಯ ಎರಡು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಬೆಳೆಸುವ ಮೂಲಕ ಕಾರ್ಯಾಗಾರದ ಸಫಲತೆಗೆ ಶಿಕ್ಷಕರು ಶ್ರಮಿಸಬೇಕು. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪವಾಡಗಳ ರಹಸ್ಯ ಬಯಲು ಕಾರ್ಯಕ್ರಮದ ಮೂಲಕ ವೈಜ್ಞಾನಿಕ ಮನೋಭಾವನೆ ಬೆಳೆಸಲು ಪ್ರತಿಯೊಬ್ಬ ಶಿಕ್ಷಕರನ್ನು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಲಾಗುವುದು. ಇದರ ಜೊತೆಗೆ ಗಣಿತ ವಿಷಯ ಬೋಧನೆಗೆ ಅನುಕೂಲವಾಗಲು ರಾಜ್ಯದ 9 ಕಡೆಗಳಲ್ಲಿ ಗಣಿತ ಲ್ಯಾಬ್ ಆರಂಭಿಸಲಾಗಿದೆ ಶಿಕ್ಷಕರು ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ರಾಜ್ಯ ಘಟಕದ ಉಪಾಧ್ಯಕ್ಷ ಎಚ್.ಜಿ.ಹುದ್ದಾರ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜ್ಞಾನ ಜನಪ್ರಿಯಗೊಳಿಸಲು ರಾಜ್ಯ ಸರಕಾರ ಕೊಟ್ಯಂತರ ರೂ.ಗಳ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಜನರ ಸಹಭಾಗಿತ್ವದೊಂದಿಗೆ ಕರಾವಿಪ ಕಾರ್ಯಕಾರಿ ಮಂಡಳಿ ರಾಜ್ಯದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿಜ್ಞಾನ ಚಟುವಟಿಕೆಗಳನ್ನು ಏರ್ಪಡಿಸುವ ಮೂಲಕ ಜನರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ ಎಂದರು.
ಕಸಾಪ ತಾಲೂಕು ಮಾಜಿ ಅಧ್ಯಕ್ಷ ಈಶ್ವರ ಹೋಟಿ, ಬೆಳಗಾವಿ ಬಿ.ಕೆ.ಕಾಲೇಜಿನ ಉಪನ್ಯಾಸಕ ಡಾ.ಡಿ.ಎನ್.ಕಸಾಳೆ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಖಜಾಂಚಿ ಈ.ಬಸವರಾಜು, ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ಬಿ.ಎಸ್.ಸೊಪ್ಪಿನ, ಜನವಿಜ್ಞಾನ ಚಳುವಳಿಯ ರಾಜ್ಯ ಸಂಯೋಜಕ ಅಣದುರೆ ಮಹಾರುದ್ರಪ್ಪ, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಾನಂದ ಕುಡಸೋಮಣ್ಣವರ ವೇದಿಕೆಯಲ್ಲಿದ್ದರು.
ಸ.ಜ.ನಾಗಲೋತಿಮಠ ವಿಜ್ಞಾನ ಕೇಂದ್ರದ ಯೋಜನಾ ಸಹಾಯಕ ರಾಜಶೇಖರ ಪಾಟೀಲ ನಿರೂಪಿಸಿದರು. ಕರಾವಿಪ ರಾಜ್ಯ ಕಾರ್ಯಕಾರಿ ಸದಸ್ಯೆ ಮೀನಾಕ್ಷಿ ಕುಡಸೋಮಣ್ಣವರ ವಂದಿಸಿದರು. ಬೆಳಗಾವಿ ಹಾಗೂ ಗುಲ್ಬರ್ಗ ವಿಭಾಗಗಳ 40 ವಿಜ್ಞಾನ ಶಿಕ್ಷಕರು ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದರು.