ಅಥಣಿ

ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಾವಿರ ಕೋಟಿ ರೂಪಾಯಿ ವೆಚ್ಚ

ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ಸಾವಿರ ಕೋಟಿ ರೂಪಾಯಿ ವೆಚ್ಚ

ಶಾಸಕರಾದ ಶ್ರೀಮಂತ ಪಾಟೀಲ ಹೇಳಿಕೆ: ಅರಳಿಹಟ್ಟಿ-ಶಿರೂರ ರಸ್ತೆ ಕಾಮಗಾರಿಗೆ ಭೂಮಿ ಪೂಜೆ 

ಅಥಣಿ 22: ಗಡಿ ಗ್ರಾಮದ ಹಲವಾರು ರಸ್ತೆ ಕಳೆದ ಐವತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು ಶಾಸಕರಾಗಿ ಆಯ್ಕೆಯಾದ ನಂತರ ಗಡಿಭಾಗದಲ್ಲಿ ಎಲ್ಲ ರಸ್ತೆಗಳೂ ಸಂಪೂರ್ಣ ಡಾಂಬರೀಕರಣಗೊಂಡಿದ್ದು ಇಲ್ಲಿಯವರೆಗೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದ ರಸ್ತೆ ಕಾಮಗಾರಿ ಮಾಡಿದ್ದು ಕ್ಷೇತ್ರವನ್ನು ಅಭಿವೃದ್ಧಿಯಲ್ಲಿ ಮಂಚೂಣಿಯಲ್ಲಿರುವಂತೆ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದು ಕಾಗವಾಡ ಶಾಸಕರಾದ ಶ್ರೀಮಂತ ಪಾಟೀಲ ಹೇಳಿದರು. 

ಗಡಿಭಾಗದ ಮಹಾರಾಷ್ಟ್ರ ಗಡಿಯಿಂದ ಅರಳಿಹಟ್ಟಿ-ಶಿರೂರ, 3 ಕೋಟಿ ವೆಚ್ಚದ ಮದಭಾವಿ-ಜಂಬಗಿ ರಸ್ತೆ  ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದವರಂತೆ ಸುಳ್ಳು ಹೇಳಿ ಜನರ ದಾರಿ ತಪ್ಪಿಸುವುದಿಲ್ಲ, ಚುನಾವಣೆಯಲ್ಲಿ ಕೊಟ್ಟ ಆಶ್ವಾಸನೆಯಂತೆ ಕೆಲಸ ಮಾಡುತ್ತ ಬಂದಿದ್ದೇನೆ, ನನ್ನ ಕೆಲಸ ನೋಡಿ ಜನರು ನನ್ನ ಬೆನೆಲುಬಾಗಿ ನಿಂತಿದ್ದಾರೆ. ನನ್ನ ಕಾರ್ಯ ಗಮನಿಸಿದ ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ. ಬರಗಾಲ ಪೀಡಿತ ಪ್ರದೇಶಕ್ಕೆ ನೀರು ಕೊಡುವ ಖೆಳೆಗಾಂವ ಬಸವೇಶ್ವರ ಏತ ನೀರಾವರಿ ಯೋಜನೆಯ ಕಾರ್ಯ ಶೇ.80 ರಷ್ಟು ಮುಕ್ತಾಯಗೊಂಡಿದ್ದು, ಕೆಲವೇ ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು. ಕೆರೆ ತುಂಬುವ ಯೋಜನೆಗೆ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಿಸಿದ್ದು, ಈ ಯೋಜನೆಯ ಕಾರ್ಯ ಪ್ರಾರಂಭಗೊಳ್ಳುವುದು ಎಂದ ಅವರು ಬರಗಾಲದಿಂದ ನರಳುವ ಗಡಿ ಗ್ರಾಮಗಳಲ್ಲಿ ಹಸಿರುಕ್ರಾಂತಿ ಮಾಡುವ ಗುರಿ ತನ್ನದಾಗಿದ್ದು, ಇದಕ್ಕೆ ಬದ್ಧನಾಗಿರುತ್ತೇನೆ ಎಂದರು.  

ಪಿಕೆಪಿಎಸ್ ಅಧ್ಯಕ್ಷ ಮರುಗೆಪ್ಪ ಮಗದುಮ್, ಗ್ರಾಪಂ ಅಧ್ಯಕ್ಷ ಬಾಳಾಸಾಹೇಬ ಜಾಧವ, ಶಿರೂರ ಗ್ರಾಪಂ ಅಧ್ಯಕ್ಷ ಬಾಳು ಹಜಾರೆ, ಧುರೀಣರಾದ ಆರ್‌.ಎಮ್‌. ಪಾಟೀಲ, ರಾಮ ಸೊಡ್ಡಿ, ಅಬ್ದುಲ್ ಮುಲ್ಲಾ, ಧೊಂಡಿರಾಮ ಹವಳೆಕರ, ಶಿವಾಜಿ ಸಾತಪುತೆ, ರಾಮ ಸೊಡ್ಡಿ, ಅಬ್ದುಲ್ ಮುಲ್ಲಾ, ಅಭಿಯಂತರರಾದ ಆರ್‌.ಪಿ.ಅವತಾಡೆ, ಗುತ್ತಿಗೆದಾರ ಇರ್ಶಾದ ಬಾರಗೀರ, ಶೇರಅಲಿ ಬಾರಗೀರ, ಸಂದೀಪ ಪಾಟೀಲ, ಅಭಿಯಂತರ ಪ್ರವೀಣ ಸೂರ್ಯವಂಶಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. 


ಸುದ್ದಿ ಓದಿ