ರಾಣೆಬೆನ್ನೂರ

ಬೇಸಿಗೆ ಶೇಂಗಾ ಕ್ಷೇತ್ರಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ

ಬೇಸಿಗೆ ಶೇಂಗಾ ಕ್ಷೇತ್ರಕ್ಕೆ  ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಭೇಟಿ


ಲೋಕದರ್ಶನ ವರದಿ 

ರಾಣಿಬೆನ್ನೂರ 25:  ತಾಲೂಕಿನ ರಾಹುತನಕಟ್ಟಿ ಗ್ರಾಮದ ಪ್ರಗತಿಪರ ರೈತ ದಿಳ್ಳೆಪ್ಪ ಎರೇಕುಪ್ಪಿ ಇವರ ಹೊಲದಲ್ಲಿ ಬೆಳೆದ ಬೇಸಿಗೆ ಶೇಂಗಾ ಕ್ಷೇತ್ರಕ್ಕೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರೀಶೀಲನೆ ನಡೆಸಿದರು. 

        ಈ ವೇಳೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾಽ ಅಶೋಕ ಪಿ ಮಾತನಾಡಿ, ಶೇಂಗಾ (ನೀರಾವರಿ) ಬೇಸಿಗೆ ಹಂಗಾಮಿನಲ್ಲಿ ಬೆಳೆಯುವ ಕ್ಷೇತ್ರ ಬೆಳೆಗಳಲ್ಲಿ ಶೇಂಗಾ ಬೆಳೆಯು ಸಹ ಒಂದು. ಇದು ಎಣ್ಣೆಕಾಳು ಬೆಳೆ. ಆಡು ಭಾಷೆಯಲ್ಲಿ ಬಡವರ ಬದಾಮಿ ಎಂದು ಕರೆಯಲ್ಪಡುತ್ತದೆ. ರಾಜ್ಯದ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನೀರಾವರಿ ಸೌಲಭ್ಯವಿರುವವರು ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಾಗಿ ಬೇಸಿಗೆಯಲ್ಲಿ ನೀರಾವರಿ ಶೇಂಗಾ ಪ್ರಮುಖ ಬೆಳೆಯಾಗಿದೆ ಎಂದರು.  

   ಸೇಂಗಾ ಬಿತ್ತನೆ ಮಾಡಿದ 15, 30 ಮತ್ತು 40 ದಿವಸಗಳ ನಂತರ ಕಳೆಗಳ ನಿರ್ವಹಣೆಗಾಗಿ ಎಡೆಕುಂಟೆ ಹಾಯಿಸಿ ಕಳೆ ನಿಯಂತ್ರಣ ಮಾಡಬೇಕು. ಕಳೆನಾಶಕ ಬಳಸಿ ಕಳೆಗಳ ಹತೋಟಿ ಮಾಡುವುದಾದಲ್ಲಿ ಬೀಜ ಬಿತ್ತಿದ ದಿನ ಅಥವಾ ಮರು ದಿನವೇ ಪ್ರತಿ ಎಕರೆಗೆ 1.2 ಲೀ. ಅಲಾಕ್ಲೋರ್ 50 ಇ. ಸಿ. ಅಥವಾ 1.3 ಲೀ. ಪೆಂಡಿಮಿಥಲಿನ್ 30 ಇ. ಸಿ. ಅಥವಾ 0.4 ಲೀ. ಮೆಟಲಾಕ್ಲೋರ್ 50 ಇ. ಸಿ. ಕಳೆನಾಶಕವನ್ನು 300 ಲೀ. ನೀರಿಗೆ ಬೆರೆಸಿ ಮಣ್ಣಿನ ಮೇಲೆ ಸಿಂಪಡಿಸಬೇಕು ಎಂದರು. 

   ಕಳೆನಾಶಕ ಸಿಂಪರಣೆ ಮಾಡುವಾಗ ಮಣ್ಣಿನಲ್ಲಿ ಸಾಕಷ್ಟು ತೇವಾಂಶವಿರಬೇಕು. ಸಿಂಪರಣೆ ಸಮಯ ಹಾಗೂ ಸಿಂಪರಣೆ ಮಾಡಿದ ನಂತರ ಸಿಂಪರಣೆ ಮಾಡಿದ ಪ್ರದೇಶವನ್ನು ತುಳಿಯಬಾರದು. ಒಂದು ವೇಳೆ ಬೀಜ ಬಿತ್ತುವ ಮುಂಚೆ ಕಳೆನಾಶಕ ಬಳಸುವುದಾದಲ್ಲಿ ಪ್ರತಿ ಎಕರೆಗೆ 0.8 ಲೀ. ಫ್ಲುಕ್ಲೋರಾಲಿನ್ 45 ಇ. ಸಿ. 300 ಲೀ. ನೀರಿನಲ್ಲಿ ಬೆರೆಸಿ ಬೀಜ ಬಿತ್ತುವ 8-15 ದಿವಸಗಳ ಮೊದಲು ಮಣ್ಣಿನಲ್ಲಿ ಬೆರೆಸಬೇಕು ಎಂದರು. 

   ಶೇಂಗಾ ಬಿತ್ತಿದ 25 ಹಾಗೂ 35 ದಿನಗಳ ನಂತರ ಎಡೆಕುಂಟೆ ಹೊಡೆಯಬೇಕು. ಸಸ್ಯ ಸಂರಕ್ಷಣೆಗಾಗಿ  ಜಿಗಿ ಹುಳು ಎಲೆಯ ರಸವನ್ನು ಹೀರುವುದರಿಂದ ಎಲೆಯ -ಸದರ ತುದಿ ಭಾಗವು “ತ” ಆಕಾರದಲ್ಲಿ ಹಳದಿ ಬಣ್ಣಕ್ಕೆ ತಿರುಗಿ ನಂತರ ಒಣಗುತ್ತದೆ. ಈ ಸಮಸ್ಯೆ ಕಂಡು ಬಂದಲ್ಲಿ ನಿರ್ವಹಣೆಗಾಗಿ ಡೈಮಿಥೋಯೇಟ 30 ಇ.ಸಿ. ಯನ್ನು ಪ್ರತಿ ಲೀಟರ್ ನೀರಿಗೆ 1.7 ಮಿ. ಲೀ. ಸೇರಿಸಿ ಸಿಂಪರಣೆ ಮಾಡಬೇಕು. ಸುರುಳಿಪೂಚಿಯ ಬಾಧೆಯಿದ್ದಲ್ಲಿ ಪ್ರೋಫೆನೋಫಾಸ್ 50 ಇ.ಸಿ., ಯನ್ನು ಪ್ರತಿ ಲೀಟರ್‌ನೀರಿಗೆ 2 ಮಿ. ಲೀ. ಸೇರಿಸಿ ಸಿಂಪರಣೆ ಮಾಡಬೇಕು. ಪ್ರತಿ ವರ್ಷವು ರೋಗ ಅಥವಾ ಕೀಟಗಳ ಬಾಧೆ ತಪ್ಪದೇ ಬರುವ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು. 

   ಮಣ್ಣು ವಿಜ್ಞಾನಿ ಡಾಽ ರಾಜಕುಮಾರ ಮಾತನಾಡಿ, ಹೂ ಬಿಡುವ ಹಂತದಲ್ಲಿ ಶೇ. 1 ರ ಪೋಟ್ಯಾಷ್ ಸಿಂಪರಣೆ ಮಾಡುವುದರಿಂದ ಎಲೆಯ ಅಂಚಿನ ಭಾಗ ಕೆಂಪಾಗುವಿಕೆಯನ್ನು ನಿವಾರಿಸುತ್ತದೆ. ಹೂ ಬಿಡುವ ಹಂತದಲ್ಲಿ ಪ್ರತಿ ಎಕರೆಗೆ 5 ಕಿ.ಗ್ರಾಂ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡುವದು ಸೂಕ್ತ. ಲಘುಪೋಶಕಾಂಶಗಳ ಕೊರತೆಯಿದಲ್ಲಿ ಇಡಿಟಿಎ ರೂಪದ ಶೇ. 0.5 ಸತುವಿನ ಸಲ್ಪೇಟ್ ಮತ್ತು ಶೇ. 0.5 ಕಬ್ಬಿಣದ ಸಲ್ಪೇಟ್, ಶೇ. 0.2 ಬೋರಾ​‍್ಯಕ್ಸ್‌, ಶೇ. 0.1 ಅಮೊನಿಯಂ ಮಾಲಿಬ್ಡೇಟ್ ಮತ್ತು ಶೇ. 0.5 ಕ್ಯಾಲ್ಸಿಯಂ ಸಲ್ಪೇಟ್‌ನ ಮಿಶ್ರಣವನ್ನು ಹೂವಾಡುವ ಹಂತದಲ್ಲಿ ಎರಡು ಬಾರಿ ಸಿಂಪರಣೆಯನ್ನು ಮಾಡಬೇಕು. ಬೆಳೆ ಹೂವಾಡುವಾಗ ಮತ್ತು ಕಾಯಿ ಆಗುವ ಸಂದಿಗ್ಧ ಹಂತಗಳಲ್ಲಿ ಯಾವುದೇ ಕಾರಣಕ್ಕೂ ಮಣ್ಣಿನ ತೇವಾಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು ಎಂದರು.  

ಈ ಸಂದರ್ಭದಲ್ಲಿ ರೈತರಾದ ಕರಿಯಪ್ಪ ಕಂಬಳಿ, ಅಂಜಪ್ಪ,  ಪಕ್ಕೀರ​‍್ಪ, ಲಕ್ಕಪ್ಪ ಬುಡಪನಹಳ್ಳಿ, ನಾಗರಾಜ ಬಣಕಾರ ಮತ್ತು ಇತತರು ಇದ್ದರು. 


ಸುದ್ದಿ ಓದಿ